ವಿಶ್ವದ ಅತಿದೊಡ್ಡ ಸ್ವಯಂ ಸೇವಾ ಅಂಬುಲೆನ್ಸ್ ಸೇವೆಯ ಸ್ಥಾಪಕ ಅಬ್ದುಲ್ ಸತ್ತಾರ್ ಈದಿಗೆ ಗೂಗಲ್ ಗೌರವ
ಇಸ್ಲಾಮಾಬಾದ್, ಫೆ. 28: ವಿಶ್ವದ ಅತಿ ದೊಡ್ಡ ಸ್ವಯಂಸೇವಾ ಆ್ಯಂಬುಲೆನ್ಸ್ ಸೇವೆ ‘ಈದಿ ಫೌಂಡೇಶನ್’ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿದೆ. ಈ ಸೇವೆಯನ್ನು ಸ್ಥಾಪಿಸಿದವರು ಅಬ್ದುಲ್ ಸತ್ತಾರ್ ಈದಿ ಸ್ಥಾಪಿಸಿದರು.
ಈದಿ ತನ್ನ 20ನೆ ವಯಸ್ಸಿನಲ್ಲೇ ತನ್ನ ಬದುಕನ್ನು ಬಡವರಿಗಾಗಿ ಅರ್ಪಿಸಿದರು. ಆಗ ಕರಾಚಿಯಲ್ಲಿ ವಾಸಿಸುತ್ತಿದ್ದ ಅವರು ಸ್ವತಃ ಬಡವರಾಗಿದ್ದರು.
ಈದಿ ಫೌಂಡೇಶನ್‌ನ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿದೆ. 2005ರಲ್ಲಿ ಕತ್ರಿನಾ ಚಂಡಮಾರುತದ ಸಂತ್ರಸ್ತರಿಗಾಗಿ ಫೌಂಡೇಶನ್ 1 ಲಕ್ಷ ಡಾಲರ್ (ಸುಮಾರು 67 ಲಕ್ಷ ರೂಪಾಯಿ) ಸಂಗ್ರಹಿಸಿತು.
ಭಾರತ ವಿಭಜನೆಗೊಳ್ಳುವ ಮೊದಲೇ ಈದಿ ಗುಜರಾತ್‌ನ ಬಂಟ್ವದಲ್ಲಿ 1928 ಫೆಬ್ರವರಿ 28ರಂದು ಜನಿಸಿದರು. ಅವರು ಕಳೆದ ವರ್ಷ ಕರಾಚಿಯಲ್ಲಿ ಮೂತ್ರನಾಳದ ವೈಫಲ್ಯದಿಂದಾಗಿ ನಿಧನರಾದರು.
ಅವರಿಗೆ ವಿದೇಶದಲ್ಲಿ ಉತ್ತಮ ಚಿಕಿತ್ಸೆ ನೀಡುವ ಕೊಡುಗೆಯನ್ನು ನೀಡಲಾಗಿತ್ತು. ಆದರೆ, ಅದನ್ನು ತಿರಸ್ಕರಿಸಿದ ಅವರು, ತನಗೆ ದೇಶದ ಸರಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಅವರು ಬದುಕಿದ್ದರೆ ಇಂದು (ಫೆಬ್ರವರಿ 28) ಅವರ 89ನೆ ಹುಟ್ಟುಹಬ್ಬವಾಗಿರುತ್ತಿತ್ತು.
ಗೂಗಲ್‌ನ ಡೂಡಲ್ ಗೌರವಅಬ್ದುಲ್ ಸತ್ತಾರ್ ಈದಿ ಗೌರವಾರ್ಥವಾಗಿ ಗೂಗಲ್ ಇಂದು ಅಮೆರಿಕ, ಐಸ್‌ಲ್ಯಾಂಡ್, ಪೋರ್ಚುಗಲ್, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಜಪಾನ್, ಎಸ್ಟೋನಿಯ, ಬ್ರಿಟನ್, ಡೆನ್ಮಾರ್ಕ್, ಐರ್‌ಲ್ಯಾಂಡ್ ಮತ್ತು ಪಾಕಿಸ್ತಾನಗಳಲ್ಲಿ ಅವರ ಹೆಸರಿನಲ್ಲಿ ಡೂಡಲ್ ಹೊರ ತಂದಿದೆ.
ಈದಿ ಅವರ ‘ಅತ್ಯಂತ ದಕ್ಷ’ ಆ್ಯಂಬುಲೆನ್ಸ್ ಸೇವೆಯನ್ನು ಗೂಗಲ್ ಶ್ಲಾಘಿಸಿದೆ.
‘‘ಅಬ್ದುಲ್ ಸತ್ತಾರ್ ಈದಿ ಅವರ ಸ್ಮರಣಾರ್ಥ ನಾವೆಲ್ಲರೂ ಇಂದು ಅಗತ್ಯದಲ್ಲಿರುವವರಿಗೆ ಸಹಾಯ ಮಾಡೋಣ’’ ಎಂದು ಅದು ಹೇಳಿದೆ.
1,800ಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳು
ಪಾಕಿಸ್ತಾನದಾದ್ಯಂತ 1,800ಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳನ್ನು ಹೊಂದಿರುವ ಈದಿ ಫೌಂಡೇಶನ್ ಆ ದೇಶದ ಅತ್ಯಂತ ದೊಡ್ಡ ನೆರವು ಸಂಘಟನೆಯಾಗಿದೆ.
1997ರಲ್ಲಿ ಈದಿ ಫೌಂಡೇಶನ್ ‘ಅತ್ಯಂತ ದೊಡ್ಡ ಸ್ವಯಂಸೇವಾ ಆ್ಯಂಬುಲೆನ್ಸ್ ಸಂಘಟನೆ’ಯಾಗಿ ಗಿನ್ನೆಸ್ ವಿಶ್ವದಾಖಲೆಗೆ ಸೇರಿತ್ತು.