ವಿಜ್ಞಾನ ಕ್ಷೇತ್ರದ ಆಧುನಿಕ ಸವಾಲುಗಳ ಕುರಿತು ಚಿಂತನೆ ಅಗತ್ಯ: ಪ್ರೊ.ಬಿ.ವಿ.ಆರ್.ಚೌಧರಿ

Update: 2017-02-28 13:14 GMT

ಕೊಣಾಜೆ: ದೇಶದ ವ್ಯವಸ್ಥೆಗಳಲ್ಲಿ ಕೊರತೆ ಇರುವುದರಿಂದ ವಿಜ್ಞಾನ ಕ್ಷೇತ್ರದಲ್ಲಿ ಹಲವು ನ್ಯೂನ್ಯತೆಗಳನ್ನು ಎದುರಿಸುವಂತಾಗಿದೆ. ಈ ಕುರಿತ ಚಿಂತನೆ ನಡೆಯಬೇಕಾಗಿದ್ದು, ಸರಕಾರ ಕೂಡಾ ಪ್ರೋತ್ಸಾಹಿಸಬೇಕಿದೆ ಅನಿವಾರ್ಯತೆ ಇದೆ ಎಂದು ಸಿಂಗಾಪುರದ ನಾನ್ಯಂಗ್ ತಾಂತ್ರಿಕ ವಿಶ್ವವಿದ್ಯಾಲಯದ ಹಿರಿಯ ಆಡಳಿತ ನಿರ್ದೇಶಕ ಪ್ರೊ.ಬಿ.ವಿ.ಆರ್.ಚೌಧರಿ ಅಭಿಪ್ರಾಯಪಟ್ಟರು.

ಅವರು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಜ್ಞಾನ, ಶಿಕ್ಷಣ ಹಾಗೂ ಸುಸ್ಥಿರ ಅಭಿವೃದ್ದಿ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ತಂತ್ರಜ್ಞಾನದೊಂದಿಗೆ ಶಿಕ್ಷಣ, ಆರ್ಥಿಕತೆ ಜೊತೆಗೆ ಮಾನವೀಯ ಮೌಲ್ಯಗಳು ಕೂಡಾ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೂತನ ತಂತ್ರಜ್ಞಾನಗಳ ಸಾಧಕ ಬಾಧಕಗಳು ಹಾಗೂ ಸವಾಲುಗಳನ್ನು ಎದುರಿಸುವ ಕುರಿತ ಚರ್ಚೆಗಳು ಇಂತಹ ಕಾರ್ಯಕ್ರಮಗಳ ಮೂಲಕ ನಡೆಯಬೇಕಿದೆ. ವಿಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆ ಮಾನವೀಯತೆಯೊಂದಿಗೆ ಜೀವಸಂಕುಲಗಳ ಉಳಿವಿನ ದೃಷ್ಟಿಯಿಂದ ಮುಂದುವರಿಯಬೇಕಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಾಧಿಸುವ ವಿಶ್ವವಿದ್ಯಾನಿಲಯಗಳಲ್ಲಿ ಭಾರತದ ಹಿಂದೆ ಇದ್ದರೂ, ಇಲ್ಲಿನ ಮಂದಿ ಮಾತ್ರ ಬಹುತೇಕ ಜಗತ್ತನ್ನು ಪ್ರತಿಪಾದಿಸುವ ವಿ.ವಿ.ಗಳಲ್ಲಿ ಮಹತ್ತರವಾದ ಕಾರ್ಯ ನಿರ್ವಹಿಸುವ ಮೂಲಕ ದೇಶಕ್ಕೆ ಕೀರ್ತಿಯನ್ನು ತರುತ್ತಿದ್ದಾರೆ ಎಂದರು.

ಸಿ.ವಿ.ರಾಮನ್ ಅವರು ಆಧುನಿಕ ತಂತ್ರಜ್ಞಾನಗಳಲ್ಲದೆ, ಸಂಪನ್ಮೂಲಗಳಿಲ್ಲದೆ ಸಂಶೋಧನೆ, ಆವಿಷ್ಕಾರಗಳನ್ನು ನಡೆಸಲು ಸಾಧ್ಯವಿದೆ ಅನ್ನುವುದನ್ನು ತೋರಿಸಿಕೊಟ್ಟಿದ್ದರು. ಅದೃಷ್ಠದ ಜತೆಗೆ ಶ್ರಮವಿದ್ದಲ್ಲಿ ಯಾವುದನ್ನೂ ಸಾಧಿಸಬಹುದು ಎಂಬುದು ಈ ಮೂಲಕ ತಿಳಿಯಬಹುದು ಎಂದ ಅವರು ಜಾಗತಿಕ ಮಟ್ಟದಲ್ಲಿ ನೀರು, ಆರೋಗ್ಯ, ಜನಸಂಖ್ಯೆ ಏರಿಕೆ, ಮಾಲಿನ್ಯ, ಆರೋಗ್ಯ ಜಾಗೃತಿ, ಭದ್ರತೆ, ಬಡತನ, ಶಿಕ್ಷಣ , ಅರಣ್ಯ ನಾಶಗಳಂತಹ ಗಂಭೀರ ಸಮಸ್ಯೆಗಳಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ನೂತನ ವಿಜ್ಞಾನಿಗಳು ಶ್ರಮವಹಿಸಿ ಕಾರ್ಯ ನಿರ್ವಹಿಸುವ ಅಗತ್ಯತೆ ಇದೆ ಎಂದರು.

ಮಂಗಳೂರು ವಿ.ವಿ ಕುಲಸಚಿವ ಪ್ರೊ.ಕೆ.ಎಂ ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತವು ಸ್ವಾತಂತ್ರ ಪೂರ್ವದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಅಥವಾ ಅಭಿವೃದ್ಧಿಯಲ್ಲಿ ಹಿಂದೆ ಇದ್ದರೂ ಸ್ವಾತಂತ್ರದ ಬಳಿಕ ವಿಜ್ಞಾನ ಕ್ಷೇತ್ರಕ್ಕೆ ಹಲವಾರು ಆವಿಷ್ಕಾರಗಳ ಮೂಲಕ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಇದೀಗ ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸುವಂತಾಗಿದೆ ಎಂದರು.

  ಕಾರ್ಯಕ್ರಮದ ಸಂಘಟಕ ಪ್ರೊ.ವೈ. ನಾರಾಯಣ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಆನಂದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News