×
Ad

ವಿಪಕ್ಷ ನಾಯಕರಿಗೆ ನಿಂದನೆ; ಪೌರಾಯುಕ್ತರಿಂದ ಕ್ಷಮೆಯಾಚನೆ

Update: 2017-02-28 19:32 IST

ಉಡುಪಿ, ಫೆ.28: ಹಿಂದಿನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ನಿಂದಿಸಿರುವ ಕುರಿತು ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆ ಯಲ್ಲಿ ವಿಪಕ್ಷ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೌರಾಯುಕ್ತ ಡಿ.ಮಂಜುನಾಥಯ್ಯ ವಿಪಕ್ಷ ನಾಯಕ ಡಾ.ಎಂ.ಆರ್.ಪೈ ಅವರಲ್ಲಿ ಕ್ಷಮೆ ಯಾಚಿಸಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ದಿನಕರ ಶೆಟ್ಟಿ ಹೆರ್ಗ, ಹಿಂದಿನ ಸಭೆ ಯಲ್ಲಿ ವಿಪಕ್ಷ ನಾಯಕ ಎಂ.ಆರ್.ಪೈ ಅವರನ್ನು ಪೌರಾಯುಕ್ತರು ನಿಂದಿಸಿ ರುವುದು ಎಲ್ಲ ಜನಪ್ರತಿನಿಧಿಗಳಿಗೂ ಮಾಡಿರುವ ಅವಮಾನ. ಆದುದರಿಂದ ಅವರು ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಪೌರಾಯುಕ್ತರು, ನಾನು ಅವರನ್ನು ನಿಂದನೆ ಮಾಡಿಲ್ಲ. ಅವರ ಬಗ್ಗೆ ನನಗೆ ಗೌರವ ಇದೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದರು. ಆದರೂ ಸುಮ್ಮನ್ನಾಗದ ಪ್ರತಿಪಕ್ಷ ಸದಸ್ಯರು, ಪೌರಾಯುಕ್ತರ ವಿರುದ್ಧ ಹೌಹಾರಿದರು. ಪೌರಾಯುಕ್ತರ ಕ್ರಮ ಖಂಡಿಸಿ ದಿಕ್ಕಾರ ಬರೆಯಲಾದ ಭಿತ್ತಿಪತ್ರವನ್ನು ಸಭೆ ಯಲ್ಲಿ ಪ್ರದರ್ಶಿಸಿದರು.

ಈ ಘಟನೆ ನಡೆದ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸದ ವಿಪಕ್ಷ ಸದಸ್ಯರು ಈಗ ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಪೌರಾಯುಕ್ತರು ಕ್ಷಮೆ ಯಾಚಿಸಿದ ಬಳಿಕವೂ ದಿಕ್ಕಾರ ಕೂಗುವುದರಲ್ಲಿ ಅರ್ಥವಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಯುವರಾಜ್ ಹೇಳಿದರು. ಪೌರಾಯುಕ್ತರು ಆ ದಿನ ಆಡಿದ ಮಾತನ್ನು ಹಿಂದೆಗೆದುಕೊಂಡು ಕ್ಷಮೆಯಾಚಿಸಬೇಕೆಂದು ಮತ್ತೆ ಪಟ್ಟು ಹಿಡಿಯಲಾಯಿತು. ಹೀಗೆ ಪೌರಾಯುಕ್ತರು ಮತ್ತೊಮ್ಮೆ ಸಭೆಯಲ್ಲಿ ವಿಪಕ್ಷ ನಾಯಕರ ಮುಂದೆ ಕ್ಷಮೆಯಾಚಿಸಿದರು. ಈ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯರು ಪ್ರತಿಭಟನೆ ಕೈಬಿಟ್ಟರು.

ಸ್ಥಾಯಿ ಸಮಿತಿಗೆ ಅನುದಾನ:

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಹೆಸರಿಗೆ ತಂದು ಕೂರಿಸಲಾಗಿದೆ. ಆ ಸಮಿತಿಗೆ ಯಾವುದೇ ಅನುದಾನ ಮೀಸಲಿರಿಸಿಲ್ಲ ಎಂದು ಚಂದ್ರಕಾತ್ ದೂರಿದರು. ಇದಕ್ಕೆ ವಿಪಕ್ಷ ಸದಸ್ಯ ಯಶ್ಪಾಲ್ ಸುವರ್ಣ ಧ್ವನಿಗೂಡಿಸಿ, ಸಮಿತಿಗೆ ಅಗತ್ಯ ಅನುದಾನವನ್ನು ಒದಗಿ ಸಬೇಕು ಎಂದು ಒತ್ತಾಯಿಸಿದರು.

ಕ್ರಿಯಾಯೋಜನೆ ತಯಾರಿಸುವಾಗ ಸಮಿತಿಗೆ ಅನುದಾನ ಒದಗಿಸುವು ದಾಗಿ ಅಧ್ಯಕ್ಷರು ಹೇಳಿದರು. ಆದರೆ ಅದಕ್ಕೆ ಸಮಾಧಾನಗೊಳ್ಳದ ಸದಸ್ಯರು, ಬಜೆಟ್‌ನಲ್ಲಿಯೇ ಅನುದಾನ ಮೀಸಲಿರಿಸುವಂತೆ ಆಗ್ರಹಿಸಿದರು. ಬಜೆಟ್ ನಲ್ಲಿ ಸ್ಥಾಯಿ ಸಮಿತಿಗೆ ಅನುದಾನ ಒದಗಿಸಲು ಅವಕಾಶವಿಲ್ಲ. ಮುಂದೆ ಕೌನ್ಸಿಲ್ ತೀರ್ಮಾನ ತೆಗೆದುಕೊಂಡು ಸಮಿತಿಗೆ ಹಣ ನೀಡಬೇಕು ಎಂದು ಮುಖ್ಯ ಅಕೌಟೆಂಟ್ ಸಭೆಯಲ್ಲಿ ಸ್ಪಷ್ಟಪಡಿಸಿದರು.

ಈ ಮಧ್ಯೆ ಸ್ಥಾಯಿ ಸಮಿತಿ ಸದಸ್ಯ ಆರ್.ಕೆ.ರಮೇಶ್ ಪೂಜಾರಿ, ಹಣ ಕೇಳಲು ಸಮಿತಿ ಅಧ್ಯಕ್ಷರಿಗೆ ಬಾಯಿ ಇಲ್ಲವೇ ಎಂದು ಟೀಕಿಸಿದರು. ಈ ಮಾತಿಗೆ ವಿರೋಧ ಹಾಗೂ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಗದ್ದಲ ಉಂಟಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಅವರು ಆರ್.ಕೆ.ರಮೇಶ್ ಪೂಜಾರಿ ಅವರ ಮಾತನ್ನು ಆಕ್ಷೇಪಿಸಿದರು. ಅಧ್ಯಕ್ಷರು ಎಲ್ಲರನ್ನು ಸಮಾಧಾನ ಪಡಿಸಿ, ಸಮಿತಿಗೆ ಅನುದಾನ ಒದಗಿಸುವ ಕುರಿತು ಅಧ್ಯಕ್ಷರೊಂದಿಗೆ ಚರ್ಚಿಸುತ್ತೇವೆ ಎಂದರು.

ಅಪಾಯಕಾರಿ ಮರಗಳ ತೆರವು: ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ನಗರಸಭೆ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರ ಗಳನ್ನು ತೆರವುಗೊಳಿಸುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಸಣ್ಣ ಮರಗಳನ್ನು ನಾವೇ ಕಡಿಯುತ್ತೇವೆ. ಆದರೆ ಬೆಳೆಬಾಳುವ ಮರಗಳನ್ನು ಕಡಿಯಲು ಹಲವು ಕಾನೂನು ಪ್ರಕ್ರಿಯೆ ಯನ್ನು ಅನುಸರಿಸಬೇಕು ಎಂದರು.

ಈ ಬಗ್ಗೆ ಚರ್ಚೆ ನಡೆದು, ಗೆಲ್ಲುಗಳನ್ನು ಮತ್ತು ಬೆಳೆಬಾಳುವ ಮರಗಳನ್ನು ಅರಣ್ಯ ಇಲಾಖೆಯವರೇ ಕಡಿದು ತೆರವುಗೊಳಿಸಬೇಕು ಮತ್ತು ಇತರ ಮರ ಗಳನ್ನು ನಗರಸಭೆಯೇ ಅನುಮತಿ ಪಡೆದು ತೆರವುಗೊಳಿಸುವುದಾಗಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ನಗರದ ಗೀತಾಂಜಲಿ ಸಂಕೀರ್ಣದ ಬಳಿ ಕೊಳಚೆ ನೀರನ್ನು ನೇರವಾಗಿ ತೊಡಿಗೆ ಬಿಡುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದ್ದು, ಈ ಬಗ್ಗೆ ಸದ್ಯವೇ ಸಭೆ ಕರೆದು ಕ್ರಮ ತೆಗೆದುಕೊಳ್ಳುವುದಾಗಿ ಹೇಳಲಾಗಿದೆ. ಇನ್ನು ಅಲ್ಲಿನ ಸಮಸ್ಯೆಗೆ ಯಾವುದೇ ಪರಿಹಾರ ಕಂಡಿಲ್ಲ ಎಂದು ಶ್ಯಾಮ್‌ಪ್ರಸಾದ್ ಕುಡ್ವ ತಿಳಿಸಿದರು. ಇದಕ್ಕೆ ಉತ್ತರಿಸಿದ ಪರಿಸರ ಇಂಜಿನಿಯರ್, ಈಗಾಗಲೇ ತ್ಯಾಜ್ಯ ನೀರನ್ನು ನೇರವಾಗಿ ತೋಡಿಗೆ ಬಿಡುವ ಮಳಿಗೆ ಹಾಗೂ ಮನೆಯವರಿಗೆ ನೋಟೀಸ್ ನೀಡಲಾಗಿದೆ. ಮುಂದೆ ಅಂತಿಮ ನೋಟೀಸ್ ಜಾರಿ ಮಾಡಿ ಕ್ರಮ ಜರಗಿಸಲಾಗುವುದು ಎಂದರು.

ಪಾರ್ಕಿಂಗ್ ವಿರುದ್ಧ ಕ್ರಮ:

ಉಡುಪಿ ಸಿಟಿಬಸ್ ನಿಲ್ದಾಣದ ರಾಜ್ ಟವರ್ ಎದುರಿನ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಹಾಗೂ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಎಂಐಟಿವರೆಗೆ ರಸ್ತೆಯ ಇಕ್ಕೇಲಗಳಲ್ಲಿ ವಾಹನ ನಿಲ್ಲಿಸುತ್ತಿರುವುದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರಾದ ವಿಜಯ ಮಂಚಿ, ದಿನಕರ ಹೆರ್ಗ, ಮಹೇಶ್ ಠಾಕೂರು ಒತ್ತಾಯಿಸಿದರು. ಈ ಬಗ್ಗೆ ಸದ್ಯವೇ ಎಸ್ಪಿಯವರ ಸಭೆ ಕರೆದು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗು ವುದು ಎಂದು ಅಧ್ಯಕ್ಷರು ಹೇಳಿದರು.

ರಸ್ತೆ ಬದಿಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳು ವಂತೆ ಸಮಿತ್ರಾ ನಾಯಕ್, ಶಶಿರಾಜ್ ಕುಂದರ್ ಆಗ್ರಹಿಸಿದರು. ಈ ಬಗ್ಗೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ವಾರ್ಡ್‌ಗಳಿಗೆ ಭೇಟಿ ನೀಡಿ ಸ್ಥಳ ಪರಿ ಶೀಲನೆ ಮಾಡಬೇಕು ಎಂದು ದಿನಕರ ಶೆಟ್ಟಿ ಹೆರ್ಗ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಈ ಸಂಬಂಧ ವಾರ್ಡ್‌ಗಳಿಗೆ ಭೇಟಿ ನೀಡ ಲಾಗುವುದು. ಅಲ್ಲದೆ ಕಸ ಸಾಗಾಟಕ್ಕಾಗಿ ವಿವಿಧ ಸಂಸ್ಥೆಗಳು ಹಾಗೂ ಬ್ಯಾಂಕ್ ಗಳ ಆರು ಟಿಪ್ಪರ್ ಲಾರಿಗಳನ್ನು ನಗರಸಭೆಗೆ ಉಚಿತವಾಗಿ ನೀಡಿವೆ. ಅಗತ್ಯ ವಿರುವ ವಾರ್ಡ್‌ಗಳಿಗೆ ಟಿಪ್ಪರ್‌ಗಳನ್ನು ನೀಡಲಾಗುವುದು ಎಂದರು.

ವಿವಿಧ ವಾರ್ಡ್‌ಗಳಲ್ಲಿನ ನೀರಿನ ಸಮಸ್ಯೆ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಪರಿಸರ ಇಂಜಿನಿಯರ್ ರಾಘವೇಂದ್ರ ಈಗಾಗಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಕೆಲವು ಕಡೆಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಸರಿಪಡಿಸಲು ಆಗಿಲ್ಲ. ಸದ್ಯಕ್ಕೆ 10-12 ಮನೆಗಳು ಬಿಟ್ಟರೆ ಉಳಿದ ಯಾವುದೇ ಮನೆಗಳಲ್ಲಿ ನೀರಿನ ಸಮಸ್ಯೆ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News