ಜಾನಪದ ಹಾಡುಗಳ ಉಳಿವು ಅಗತ್ಯ: ಪ್ರೊ.ಸೋಮಯಾಜಿ
ಉಡುಪಿ, ಫೆ.28: ಇಂದಿನ ಜಾಗತೀಕರಣದ ಕಾಲಚಕ್ರಕ್ಕೆ ಸಿಲುಕಿದ ಮಾನವ, ಹಿಂದಿನ ಸಾಂಪ್ರದಾಯಿಕ ಜೀವನ ಶೈಲಿಯನ್ನು ಬಿಟ್ಟು ಪಾಶ್ಚಾತ್ಯ ಹಾಗೂ ಆಧುನಿಕತೆಗೆ ಮಾರುಹೋಗಿದ್ದಾನೆ. ಭತ್ತ ಕಟ್ಟುವಾಗ, ಕಳೆ ಕೀಳು ವಾಗ, ಬೇಸಾಯ ಮಾಡುವಾಗ, ಆರತಿ ಎತ್ತುವಾಗ ಮುಂತಾದ ಸಂದರ್ಭ ದಲ್ಲಿ ಹೇಳುತ್ತಿದ್ದ ಹಾಡುಗಳು, ವೌಖಿಕ ನೆಲೆಯಲ್ಲಿ ಗುರುತಿಸಿದರೂ ಕೂಡ ಅದನ್ನು ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಸಾಹಿತಿ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಹೇಳಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಕಾಲೇಜಿನ ಸಿಲ್ವರ್ ಜುಬಿಲಿ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾದ ಪರಿಷತ್‌ನ ಜಿಲ್ಲಾ ಘಟಕದ ಚಟುವಟಿಕೆಗಳ ಹಾಗೂ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ವಹಿಸಿ ದ್ದರು. ಹಿರಿಯ ಜಾನಪದ ವಿದ್ವಾಂಸ ಉಪ್ಪುಂದ ಚಂದ್ರಶೇಖರ ಹೊಳ್ಳ ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷರುಗಳಿಗೆ ಹಾಗೂ ಪದಾಧಿಕಾರಿಗಳಿಗೆ ಅಡಿಕೆ ವೀಳ್ಯದೆಲೆ ನೀಡುವ ಮೂಲಕ ಪದಗ್ರಹಣ ನೆರವೇರಿಸಿದರು.
ಚ್ಯವನ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತ ನಿರ್ದೇಶಕ ಪಿ.ಎ.ಭಟ್, ರೋಟರಿ ಕ್ಲಬ್ ಉಡುಪಿ ಅಧ್ಯಕ್ಷ ಸುರೇಶ್ ಶೆಣೈ, ಕಲ್ಯಾಣಪುರದ ಮಾಜಿ ರೋಟರಿ ಅಧ್ಯಕ್ಷ ವಿಜಯ ಮಾಯಾಡಿ ಮುಖ್ಯ ಅತಿಥಿಗಳಾಗಿದ್ದರು.
ಹಿರಿಯ ಕಲಾವಿದರಾದ ಜಗನ್ನಾಥ ಪಾಣ ಮಟ್ಟಾರು, ಲಕ್ಷ್ಮಣ ಪಾಣ, ಶಿರಿಯಾರ ಹಾಗೂ ನಾಟಿ ವೈದ್ಯ ಹೊಸ್ಮಾರು ಜಯ ಸುವರ್ಣರನ್ನು ಸನ್ಮಾನಿಸ ಲಾಯಿತು. ಜಿಲ್ಲಾ ಜೊತೆ ಕಾರ್ಯದರ್ಶಿ ಚಂದ್ರ, ಕುಂದಾಪುರ ಘಟಕದ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಾರ್ಕಳ ತಾಲೂಕು ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಭಿನಂದನಾ ಪತ್ರ ವಾಚಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ತಾಲೂಕು ಅಧ್ಯಕ್ಷ ಶಶಿಕಾಂತ ಶೆಟ್ಟಿ ವಂದಿಸಿ ದರು. ವಿದ್ಯಾರ್ಥಿನಿ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು. ನಂತರ ವೈವಿಧ್ಯಮಯ ಜಾನಪದ ನೃತ್ಯಗಳು ಪ್ರದರ್ಶನಗೊಂಡವು.