×
Ad

ಉಳ್ಳಾಲ: ನಗರಸಭೆ ಮಿಗತೆ ಬಜೆಟ್ ಮಂಡನೆ

Update: 2017-02-28 20:22 IST

ಮಂಗಳೂರು, ಫೆ.28: ಉಳ್ಳಾಲ ನಗರ ಸಭಾಧ್ಯಕ್ಷ ಹುಸೈನ್ ಕುಂಞಿಮೋನು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಗರಸಭೆಯ ಪೌರಾಯುಕ್ತೆ ವಾಣಿ ವಿ.ಆಳ್ವ 14.70 ಕೋ.ರೂ. ಮಿಗತೆ ಬಜೆಟ್ ಮಂಡಿಸಿ ಗಮನ ಸೆಳೆದಿದ್ದಾರೆ.

2017-18ನೇ ಸಾಲಿನ ಬಜೆಟ್ ಗಾತ್ರ 58.97 ಕೋ.ರೂ.ನಲ್ಲಿ 29.11 ಕೋ.ರೂ. ಖರ್ಚು ಹಾಗೂ 29.25 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ. ಘನತ್ಯಾಜ್ಯ ವಿಲೇವಾರಿ, ಸ್ವಚ್ಛತೆ, ಆರೋಗ್ಯ, ಕುಡಿಯುವ ನೀರು ಹಾಗೂ ನಗದುರಹಿತ ವ್ಯವಹಾರ ನಿಟ್ಟಿನಲ್ಲಿ ಕಚೇರಿ ಪೂರ್ಣ ಪ್ರಮಾಣದ ಗಣಕೀಕರಣಕ್ಕೆ ಆದ್ಯತೆ ನೀಡಲಾಗಿದೆ.

ನಗರಸಭೆ 4.32 ಕೋ. ರೂ. ಆದಾಯ ಹೊಂದಿದ್ದು, 4.17 ಕೋ.ರೂ. ಖರ್ಚು, ಸರಕಾರದಿಂದ 24.94 ಕೋ.ರೂ. ಅನುದಾನ ಹಾಗೂ 24.94 ಕೋ.ರೂ. ಖರ್ಚು ನಿರೀಕ್ಷಿಸಲಾಗಿದೆ. ಕುಡಿಯುವ ನೀರಿಗೆ 5.30 ಕೋ.ರೂ., ಎಸ್ಸಿ-ಎಸ್ಟಿ ಪ್ರದೇಶಾಭಿವೃದ್ಧಿಗೆ 3.69 ಕೋ.ರೂ., ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗೆ 8.13 ಕೋ.ರೂ., ಚರಂಡಿ ನಿರ್ಮಾಣಕ್ಕೆ 1.16 ಕೋ.ರೂ., ತೊಕ್ಕೊಟ್ಟಿನಲ್ಲಿರುವ ಪೆರ್ಮನ್ನೂರು ಗ್ರಾಮಕರಣಿಕರ ಕಚೇರಿ, ನೆಮ್ಮದಿ ಕೇಂದ್ರ, ಶಾಸಕರ ಕಚೇರಿ ನಿರ್ಮಾಣ, ನಗರಸಭಾ ಕಟ್ಟಡ ಅಭಿವೃದ್ಧಿಗೆ 60.45 ಲಕ್ಷ ರೂ., ದಾರಿದೀಪ ಮತ್ತು ಪಾರ್ಕ್ ಅಭಿವೃದ್ಧಿಗೆ 72 ಲಕ್ಷ ರೂ., ತೊಕ್ಕೊಟ್ಟಿನಲ್ಲಿ ಮಾರುಕಟ್ಟೆ ನಿರ್ಮಾಣ, ಡಾ.ಬಿ.ಆರ್.ಅಂಬೇಡ್ಕರ್ ರಂಗಮಂದಿರ ಅಭಿವೃದ್ಧಿ, ರಿಕ್ಷಾ ತಂಗುದಾಣ ಅಭಿವೃದ್ಧಿಗೆ 3 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.

ಕೌನ್ಸಿಲರ್‌ಗಳ ಭಿನ್ನಮತ: 
ನಗರಸಭಾ ವ್ಯಾಪ್ತಿಯಲ್ಲಿರುವ ಅನಧಿಕೃತ ವ್ಯಾಪಾರಿಗಳಿಗೆ ದಂಡ ಅಥವಾ ತೆರವುಗೊಳಿಸುವ ಬಗ್ಗೆ ಬಜೆಟ್ ಬಳಿಕ ನಡೆದ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತೆ ವಾಣಿ ವಿ.ಆಳ್ವ ಗಮನ ಸೆಳೆದರು. ಈ ವಿಚಾರವಾಗಿ ಕೌನ್ಸಿಲರ್‌ಗಳಲ್ಲೇ ಭಿನ್ನಾಭಿಪ್ರಾಯಗಳು ಉಂಟಾಗಿ ಸಭೆ ಗದ್ದಲದ ಗೂಡಾಯಿತು.

ದಾಖಲೆಗಳಿಲ್ಲದ ಅಂಗಡಿ ಮಾಲಕರಲ್ಲಿ ದಂಡ ವಸೂಲು ಮಾಡಿ ರಶೀದಿ ನೀಡಿದರೆ ಅದನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಎಂದು ಕೆಲವು ಕೌನ್ಸಿಲರ್ ಅಭಿಪ್ರಾಯಪಟ್ಟರು. ಒಂದೋ ಪರವಾನಿಗೆ ನೀಡಿ ಅಥವಾ ಮುಚ್ಚಿಬಿಡಿ ಎಂಬ ಒಂದಿಬ್ಬರು ಕೌನ್ಸಿಲರ್‌ಗಳ ಹೇಳಿಕೆಗೆ ಫಾರೂಕ್ ಉಳ್ಳಾಲ್, ಅಬ್ದುಲ್ ಫತಾಕ್ ವಿರೋಧ ವ್ಯಕ್ತಪಡಿಸಿದರು.

 ನಗರಸಭಾ ವ್ಯಾಪ್ತಿಯ ರಸ್ತೆಬದಿಯಿರುವ ಅನಧಿಕೃತ ಪೆಟ್ಟಿಗೆ ಅಂಗಡಿ ಹಾಗೂ ಮೀನು ವ್ಯಾಪಾರ ತೆರವುಗೊಳಿಸುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದು, ಮುಂದಿನ ವಾರ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೌರಾಯುಕ್ತೆ ತಿಳಿಸಿದರು. ಈ ಸಂದರ್ಭವೂ ವಾದ-ವಿವಾದ ಉಂಟಾಯಿತು. ಕಾಂಗ್ರೆಸ್‌ನ ದಿನೇಶ್ ರೈ, ಬಿಜೆಪಿಯ ಮಹಾಲಕ್ಷ್ಮಿ ಸಹಿತ ಕೆಲವು ಮಂದಿ ಬೆಂಬಲ ವ್ಯಕ್ತಪಡಿಸಿದರೆೆ, ಬಾಝಿಲ್ ಡಿಸೋಜ ಸಹಿತ ಕೆಲವರು ವಿರೋಧಿಸಿದರು.

ಈ ವಿಚಾರದಲ್ಲಿ ಕಾನೂನು ತಜ್ಞರಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಾಣಿ ಆಳ್ವ ಚರ್ಚೆ ಕೊನೆಗೊಳಿಸಿದರು.

ಸ್ಥಾಯಿ ಸಮಿತಿ ಗೊಂದಲ: 

ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರ ಆಯ್ಕೆ ವಿಚಾರ ಪ್ರತಿಪಕ್ಷಕ್ಕಿಂತಲೂ ಕಾಂಗ್ರೆಸ್‌ನಲ್ಲೇ ಗೊಂದಲಕ್ಕೆ ಕಾರಣವಾಯಿತು. ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು 11 ಸ್ಥಾಯಿ ಸಮಿತಿ ಸದಸ್ಯರ ಪೈಕಿ ಎರಡು ಸ್ಥಾನ ಪ್ರತಿಪಕ್ಷಕ್ಕೆ ಮೀಸಲಿಟ್ಟು ಆಡಳಿತ ಪಕ್ಷದ ಸದಸ್ಯರ ಹೆಸರು ವಾಚಿಸಿದರು.

ಬಳಿಕ ಅಧ್ಯಕ್ಷರ ಆಯ್ಕೆ ಸಂದರ್ಭ ಇತ್ತೀಚೆಗಷ್ಟೇ ನಡೆದ ಮರುಚುನಾವಣೆಯಲ್ಲಿ ಗೆಲುವು ಸಾಧಿಸಿದ ಉಸ್ಮಾನ್ ಕಲ್ಲಾಪು ಅವರ ಹೆಸರನ್ನು ಮುಸ್ತಫಾ ಅಬ್ದುಲ್ಲಾ ಪ್ರಸ್ತಾವಿಸಿದರೆ, ದಿನೇಶ್ ರೈ ಅನುಮೋದಿಸಿದರು. ಈ ಸಂದರ್ಭ ಮಾಜಿ ಅಧ್ಯಕ್ಷೆ ಗಿರಿಜಾ ಬಾ ಅವರು ಅಶ್ರಫ್ ಬಾವ ಅವರ ಹೆಸರು ಸೂಚಿಸಿದರು.

ಸ್ಥಾಯಿ ಸಮಿತಿ ಸದಸ್ಯರು ಮಾತ್ರವೇ ಅಧ್ಯಕ್ಷರ ಹೆಸರು ಸೂಚಿಸುವ ಅಧಿಕಾರ ಹೊಂದಿದ್ದರೂ ಸ್ಥಾಯಿ ಸಮಿತಿಯ ಸದಸ್ಯೆಯಲ್ಲದ ಗಿರಿಜಾ, ಅಶ್ರಫ್ ಹೆಸರು ಸೂಚಿಸಿದ್ದು ಗೊಂದಲಕ್ಕೆ ಕಾರಣವಾಯಿತು.

ಸ್ಥಾಯಿ ಸಮಿತಿಗೆ ಸದಸ್ಯರ ಹೆಸರು ವಾಚಿಸುವ ಸಂದರ್ಭ ಮೌನವಾಗಿದ್ದ ಬಿಜೆಪಿ ಸದಸ್ಯರು ಗೊಂದಲದ ಮಧ್ಯೆ ಕಾಂಗ್ರೆಸ್‌ನ ಅಶ್ರಫ್‌ರನ್ನು ಬೆಂಬಲಿಸಿದರು. ಕೊನೆಗೆ ಪರವಿರೋಧದ ಚರ್ಚೆಯ ಮಧ್ಯೆ ಉಸ್ಮಾನ್ ಕಲ್ಲಾಪು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷೆ ಚಿತ್ರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News