×
Ad

ಬೆಳ್ತಂಗಡಿ: ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Update: 2017-02-28 20:37 IST

ಬೆಳ್ತಂಗಡಿ, ಫೆ.28: ಪುಂಜಾಲಕಟ್ಟೆಯಂತಹ ಗ್ರಾಮೀಣ ಭಾಗದಲ್ಲಿ ಕಾಲೇಜು ಅಭಿವೃದ್ಧಿ ಪಡಿಸಿರುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಶೈಕ್ಷಣಿಕ ಶಕ್ತಿ ಕೊಡುವ ನಿಟ್ಟಿನಲ್ಲಿ ಶೈಕ್ಷಣಿಕ ಮಟ್ಟ ಹೆಚ್ಚಿಸಿ ವಿಶೇಷ ಸ್ಥಾನಮಾನ ನೀಡುವಂತಾಗುತ್ತದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

ಅವರು ಮಂಗಳವಾರ ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

 ಪುಂಜಾಲಕಟ್ಟೆ ಕಾಲೇಜಿನಲ್ಲಿ 592 ವಿದ್ಯಾರ್ಥಿಗಳಲ್ಲಿ ಶೇಕಡಾ 80 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿರುವುದು ಕ್ರಾಂತಿಕಾರಕ ಬದಲಾವಣೆಯಾಗಿದೆ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದರಿಂದ ಕುಟುಂಬ ಹಾಗೂ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದರು.

ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜು ಕಳೆದ 9 ವರ್ಷಗಳಿಂದ ಕಟ್ಟಡ ಮತ್ತು ವಿವಿಧ ಕೊರತೆಗಳ ನಡುವೆಯೂ ಉತ್ತಮ ಶಿಕ್ಷಣ ನೀಡುತ್ತಿದ್ದು ಉತ್ತಮ ಫಲಿತಾಂಶವನ್ನು ಪಡೆದಿದೆ. ಇದಕ್ಕೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಗೂ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಮತ್ತು ವಿದ್ಯಾರ್ಥಿ ವೃಂದ ಅಭಿನಂದನೀಯರು. ಕಾಲೇಜಿನ ಅಭಿವೃದ್ಧಿಗೆ ಪೂರಕವಾದ ಬೇಡಿಕೆಗಳನ್ನು ಹಂತ ಹಂತವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಲ್ಲಿ ಪೂರೈಸಲಾಗುವುದು ಎಂದ ಅವರು ವಿದ್ಯಾರ್ಜನೆ ಮುಖ್ಯ ಗುರಿಯಾಗಿರಿಸಿಕೊಂಡು ಗುರಿ ಮುಟ್ಟುವ ಹುಮ್ಮಸ್ಸಿನಿಂದ ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಉತ್ತಮ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ತರಗತಿ ಕೊಠಡಿಗೆ ಸೀಮಿತಗೊಳ್ಳದೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿಕೊಂಡು ಸವಾಲುಗಳನ್ನು ಸ್ವೀಕರಿಸಿ ಉತ್ತಮ ಅವಕಾಶಗಳನ್ನು ಗಳಿಸಿ ಜೀವನದಲ್ಲಿ ಪ್ರಗತಿ ಹೊಂದಬೇಕು. ಸರಕಾರಿ ಕಾಲೇಜು ಎಂಬ ಕೀಳರಿಮೆ ಹೊಂದದೆ ಛಲದಿಂದ ಸಾಧನೆ ನಡೆಸಬೇಕು ಎಂದರು.

 ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಅವರು ಮಾತನಾಡಿ ಹಣ, ಆಸ್ತಿಯ ಸಂಪತ್ತಿಗಿಂತ ಉನ್ನತ ಶಿಕ್ಷಣದ ಪದವಿಯಿಂದ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ಉನ್ನತ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಂದ್ರ ಕೆ.ವಿ.,ರಾಜಶೇಖರ ಶೆಟ್ಟಿ,ಶೈಲೇಶ್ ಕುಮಾರ್,ಪದ್ಮನಾಭ ಸಾಲಿಯಾನ್,ಕೆ.ಎ.ವೆಂಕಪ್ಪ ಬಂಗೇರ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನ್ ಸಾಲ್ಯಾನ್,ಮಾಜಿ ಅಧ್ಯಕ್ಷ ದೇವಪ್ಪ ಶೆಟ್ಟಿ ಕುಂಟಜಾಲು,ಸದಸ್ಯರಾದ ಉಸ್ಮಾನ್ ಪಿ.,ಹೈದರ್ ಹಳ್ಳಿಮನೆ,ಗಣೇಶ್ ಮೂಲ್ಯ,ದಿನೇಶ್ ಆಚಾರ್ಯ , ಸಾಂತಪ್ಪ ಪುರಿಯ,ಮಾಲತಿ,ವಿನೋದ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಗೌಡ ಅವರು ವೇದಿಕೆಯಲ್ಲಿದ್ದರು.

ಇದೇ ವೇಳೆ ಶಾಸಕ ಕೆ.ವಸಂತ ಬಂಗೇರ,ಕಟ್ಟಡ ನಿರ್ಮಾಣ ಕಾಮಗಾರಿಗೆ ಸಹಕರಿಸಿದ ರಾಜೇಂದ್ರ ಕೆ.ವಿ.,ದೇವಪ್ಪ ಶೆಟ್ಟಿ,ರೈಟ್ಸ್ ಸಂಸ್ಥೆಯ ಸುನಿಲ್,ಅನೀಶ್,ಪ್ರಾ.ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಕೆ., ಪ್ರೌ.ಶಾಲಾ ಉಪ ಪ್ರಾಂಶುಪಾಲೆ ಅರ್ಚನಾ,ಪ.ಪೂ.ಕಾಲೇಜು ಪ್ರಾಂಶುಪಾಲ ಸುಕುಮಾರ್ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಬೇಡಿಕೆಗಳ ಮನವಿಯನ್ನು ಪ್ರಾಂಶುಪಾಲರು ಸಚಿವರಲ್ಲಿ ಮತ್ತು ಶಾಸಕರಲ್ಲಿ ಸಲ್ಲಿಸಿದರು.

 ಕಾಲೇಜು ಪ್ರಾಂಶುಪಾಲ ಪ್ರೊ.ಗಣಪತಿ ಭಟ್ ಕುಳಮರ್ವ ಅವರು ಸ್ವಾಗತಿಸಿದರು. ಪ್ರೊ.ಚೇತನ್ ಪ್ರಸ್ತಾವಿಸಿದರು. ಪ್ರೊ.ಮಾಧವ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಮತ್ತು ಪ್ರೊ.ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News