ಅಚ್ಚಗನ್ನಡದ ದೇಸೀ ಕವಿ ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡ- ಲಕ್ಷ್ಮೀಶ ಚೊಕ್ಕಾಡಿ
ಪುತ್ತೂರು: 'ಕಬ್ಬಿಗರ ಕಾವರಚಿಸಿದ ಕವಿ ಅಂಡಯ್ಯರ ರಚನೆ ತದ್ಬವ ಕನ್ನಡವಾದರೆ ಕೊಳಂಬೆ ಪುಟ್ಟಣ್ಣ ಗೌಡರದು ಅಚ್ಚಗನ್ನಡ ದೇಸೀ ಕನ್ನಡ ಎಂದು ಲಕ್ಷ್ಮೀಶ ಚೊಕ್ಕಾಡಿ ಅಭಿಪ್ರಾಯಪಟ್ಟರು.
ಅವರು ದೇರಾಜೆ ಸೀತಾರಾಮ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀ ರಾಮ ಸೇವೇ ಸಮಿತಿ ಚೊಕ್ಕಾಡಿ ಇದರ ಸಹಯೋಗದಲ್ಲಿ ಚೊಕ್ಕಾಡಿ ಶ್ರೀ ರಾಮ ದೇವಸ್ಥಾನದ ದೇಸೀ ಭವನದಲ್ಲಿ ನಡೆದ ಕವಿ ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿದರು.
ಪುಟ್ಟಣ್ಣ ಗೌಡರ ರಚಿತ 'ಕಾಲೂರ ಚೆಲುವೆಕಾವ್ಯ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಅಪೂರ್ವ ಕೊಡುಗೆಯಾಗಿದೆ. ಓರ್ವ ಉತ್ತಮ ಯಕ್ಷಗಾನ ಅರ್ಥಧಾರಿಯೂ ಆಗಿದ್ದ ಪುಟ್ಟಣ್ಣ ಗೌಡರು ಸರಳ, ಸಾತ್ವಿಕ ಸ್ವಭಾವದವರಾಗಿದ್ದು ಯಾರಿಗೂ ನೋವು ಮಾಡಿದವರಲ್ಲ. ಅವರೊಬ್ಬ ಅಪ್ಪಟ ಮಣ್ಣಿನ ಮಗ ಎಂದರು.
ಕಾರ್ಯವನ್ನು ಗಿಲಿಗಿಲಿ ಮ್ಯಾಜಿಕ್‌ನ ಜಾದೂಗಾರ ಪ್ರೊ. ಶಂಕರ್ ಉದ್ಘಾಟಿಸಿದರು. ಆನೆಕಾರ ಗಣಪಯ್ಯ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ರಂಗವಿನ್ಯಾಸಗಾರ ಮೂರ್ತಿ ದೇರಾಜೆ ಅವರು ಜಯಲಕ್ಷ್ಮೀ ಜೋಷಿ ಅವರ ಕೃತಿ 'ಲಾವಣಿ ರಾಮಾಯಣವನ್ನು ಲೋಕಾರ್ಪಣೆಗೊಳಿಸಿದರು. ಕೊಳಂಬೆ ಪುಟ್ಟಣ್ಣ ಗೌಡರ ಪುತ್ರಿ ಶೀಲಾವತಿ ಕೊಳಂಬೆ ಮಾತನಾಡಿದರು.
ವೇದಿಕೆಯಲ್ಲಿ ಡಾ. ರಂಗಯ್ಯ, ಗಣೇಶ್ ಭಟ್, ಜಯಲಕ್ಷ್ಮೀ ಜೋಷಿ ಉಪಸ್ಥಿತರಿದ್ದರು.
ಶಿವರಾಮ ಅಮಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣೇಶ ಮೂರ್ತಿ ನೇಣಾರು ಸ್ವಾಗತಿಸಿದರು. ಡಾ. ಸುಬ್ರಹ್ಮಣ್ಯ ಭಟ್ ವಂದಿಸಿದರು. ರಾಮಜೋಯಿಸ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.