ಕುಂದಾಪುರ ಪುರಸಭೆ ಸಾಮಾನ್ಯ ಸಭೆ: ನಗರೋತ್ಥಾನ ಅನುದಾನ ಹಂಚಿಕೆಗಾಗಿ ವಾಗ್ವಾದ
ಕುಂದಾಪುರ, ಫೆ.28: ನಗರೋತ್ಥಾನ ಅನುದಾನವನ್ನು ಈಗಾಗಲೇ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿಗೆ ಬಳಸುವಂತೆ ಕೆಲ ಸದಸ್ಯರು ಒತ್ತಾಯಿಸಿದರೆ, ಇನ್ನು ಕೆಲವು ಸದಸ್ಯರು ಆ ಅನುದಾನದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಪಟ್ಟು ಹಿಡಿದರು. ಇದರಿಂದ ಮಂಗಳವಾರ ನಡೆದ ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳ ಮಧ್ಯೆ ವಾಗ್ವಾದ ಉಂಟಾಗಿ ಗದ್ದಲಕ್ಕೆ ಕಾರಣವಾಯಿತು.
ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಪ್ರಭಾಕರ ಕೋಡಿ, ಸಂದೀಪ ಕೋಡಿ, ಜ್ಯೋತಿ, ಕಡಲತೀರ ಪ್ರದೇಶವಾದ ಕೋಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇದಕ್ಕೆ ನಗರೋತ್ಥಾನ ಅನುದಾನದಲ್ಲಿ ಕನಿಷ್ಟ ಒಂದು ಕೋಟಿ ಹಣವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ರವಿರಾಜ್ ಖಾರ್ವಿ, ಶಾಸಕರ ಉಪಸ್ಥಿತಿ ಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಗರೋತ್ಥಾನದ ಹಣವನ್ನು ಯುಜಿಡಿಗೆ ಬಳಸಲು ಎಲ್ಲಾ ಸದಸ್ಯರು ಒಮ್ಮತ ಸೂಚಿಸಿದ್ದರು. ಇದೀಗ ಮತ್ತೆ ಗೊಂದಲ ಸೃಷ್ಠಿ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಉಪಾ ಧ್ಯಕ್ಷ ರಾಜೇಶ ಕಾವೇರಿ, ಈ ಅನುದಾನವನ್ನು ಎರಡು ಯೋಜನೆಗಳಿಗೆ ಬಳಸಿ ಕೊಂಡರೆ ಎರಡೂ ಕೂಡ ಪೂರ್ಣವಾಗುವುದಿಲ್ಲ. ಯುಜಿಡಿ ಕಾಮಗಾರಿ ಸರಕಾರದ ಯೋಜನೆಯಾಗಿರುವುದರಿಂದ ಅದಕ್ಕೆ ಪುರಸಭೆಯ ಅನುದಾನ ನೀಡುವುದು ಸರಿಯಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಯುಜಿಡಿ ಕಾಮಗಾರಿ ಅಪೂರ್ಣವಾಗಿ ರುವುದರಿಂದ ನಗರೋತ್ಥಾನದ ಹಣವನ್ನು ಈ ಕಾಮಗಾರಿಗೆ ಬಳಸುವುದೇ ಸೂಕ್ತ ಎಂದರು. ನಗರೋತ್ಥಾನ ಅನುದಾನದಲ್ಲಿ ಒಂದು ಕೋಟಿ ಹಣವನ್ನು ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಎಲ್ಲ ಅನುದಾನ ಯುಜಿಡಿಗೆ ಕೊಟ್ಟರೆ ವಾರ್ಡ್‌ಗಳ ಅಭಿ ವೃದ್ದಿಗೆ ಹೇಗೆ ಮಾಡುವುದು. ಪುರಸಭೆಯ ಅಭಿವೃದ್ದಿಗೆ ಶಾಸಕರೇನು ಕೊಟ್ಟಿ ದ್ದಾರೆ ಎಂದು ಸಂದೀಪ ಕೋಡಿ ಪ್ರಶ್ನಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರವಿರಾಜ್ ಖಾರ್ವಿ, ನಿಮ್ಮ ಸರ್ಕಾರ ಏನು ಕೊಟ್ಟಿದೆ ಎಂದು ವಾಗ್ವಾಳಿ ನಡೆಸಿದರು. ಇದರಿಂದ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರುಗಳ ಮಧ್ಯೆ ವಾಗ್ವಾದ ನಡೆದು ಸಭೆಯಲ್ಲಿ ಗದ್ದಲ ಉಂಟಾಯಿತು. ಅನುದಾನ ಬಳಕೆ ವಿಚಾರದಲ್ಲಿ ಪರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ.
ಸದಸ್ಯರಾದ ಗುಣರತ್ನ, ರವಿಕಲಾ, ಸಂದೀಪ, ಪ್ರಭಾಕರ, ಉದಯ್ ಮೆಂಡನ್ ಮಾತನಾಡಿ, ಪುರಸಭೆಗೆ ಖಾಯಂ ಇಂಜಿನಿಯರ್ ನೇಮಕ ಮಾಡಿಲ್ಲ. ಈಗ ಇರುವ ಇಂಜಿನಿಯರ್ ಬೇರೆ ಕಡೆ ಕೆಲಸ ಮಾಡಿ ಇಲ್ಲಿ ಬರಬೇಕು. ಹಾಗಾಗಿ ಅವರಿಗೆ ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗಲು ಆಗುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರಾಜೇಶ ಕಾವೇರಿ, ಇಂಜಿನಿಯರ್ ಕೊರತೆಯ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಶೀಘ್ರವೇ ಸ್ಪಂದಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ ಎಂದರು.
ಟೋಲ್ ಪಾವತಿಗೆ ಸಂಬಂಧಿಸಿದಂತೆ ಹಿಂದಿನ ಸಭೆಯಲ್ಲಿ ಮಾಡಲಾಗಿದ್ದ ಖಂಡನಾ ನಿರ್ಣಯವನ್ನು ಸಂಬಂಧಪಟ್ಟವರಿಗೆ ತಲುಪಿಸಲು ಒಂದು ತಿಂಗಳು ಬೇಕಾಗಿದೆ. ಇದು ಸರಿಯಾದ ಕ್ರಮ ಅಲ್ಲ ಎಂದು ಸದಸ್ಯ ಚಂದ್ರ ಶೇಖರ ಖಾರ್ವಿ ದೂರಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.