×
Ad

ವಿಜ್ಞಾನ ಮತ್ತು ಜ್ಞಾನ ಶಾಖೆಗಳ ಮಧ್ಯೆ ಸಮನ್ವಯ ಅಗತ್ಯ: ಪಿ.ಬಲರಾಂ

Update: 2017-02-28 21:24 IST

ಮಂಗಳೂರು, ಫೆ.28: ವಿಜ್ಞಾನದ ಸಂಪೂರ್ಣ ಪ್ರಯೋಜನ ಪಡೆಯಬೇಕಾದರೆ ಅದರ ವಿವಿಧ ಜ್ಞಾನಶಾಖೆಗಳ ಮಧ್ಯೆ ಸಮನ್ವಯ ಅಗತ್ಯ. ಇಲ್ಲದಿದ್ದರೆ ವಿಜ್ಞಾನ ವಿನಾಶಕ್ಕೆ ಕಾರಣವಾಗುತ್ತದೆಯೇ ವಿನಃ ವಿಕಾಸಕ್ಕೆ ಅಲ್ಲ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಮಾಜಿ ನಿರ್ದೇಶಕ ಪಿ. ಬಲರಾಂ ಅಭಿಪ್ರಾಯಪಟ್ಟರು.

ನಗರದ ಸಂತ ಅಲೋಶಿಯಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಱಹಸಿರು ರಸಾಯನಶಾಸ್ತ್ರ ಮತ್ತು ನ್ಯಾನೊ ತಂತ್ರಜ್ಞಾನ: ಅವಕಾಶಗಳು ಮತ್ತು ಸವಾಲುಗಳುೞ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನಗಳು ಜನರ ಬದುಕಿನ ಗುಣಮಟ್ಟ ಹೆಚ್ಚಿಸುವ ಜತೆಗೆ ಸುಸ್ಥಿರ ಅಭಿವೃದ್ಧಿ ಸಮಸ್ಯೆ ಮತ್ತು ಪರಿಸರ ಸಮಸ್ಯೆಯಂತಹ ಸವಾಲುಗಳನ್ನೂ ತಂದೊಡ್ಡಿದೆ. ಇದರ ಸಮತೋಲನಕ್ಕೆ ಯುವ ಜನಾಂಗ ಶ್ರಮಿಸಬೇಕು ಎಂದು ಪಿ. ಬಲರಾಂ ಸಲಹೆ ಮಾಡಿದರು.

 ಹಸಿರು ರಸಾಯನಶಾಸ್ತ್ರ ಎಂಬ ಪರಿಕಲ್ಪನೆಯೇ ಕಾರ್ಯಸಾಧುವಲ್ಲ. ಔಷಧ ಉತ್ಪಾದನಾ ಕ್ಷೇತ್ರ ಅಥವಾ ನ್ಯಾನೊ ತಂತ್ರಜ್ಞಾನವನ್ನು ತೆಗೆದುಕೊಂಡರೆ ಅದರಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಿಕೊಳ್ಳುವುದು ದುಬಾರಿಯಾಗಬಹುದು. ಹಾಗೆಂದು ಸುಮ್ಮನಾದರೆ ಭವಿಷ್ಯದಲ್ಲಿ ಪರಿಸರಕ್ಕೆ ಇದು ಮಾರಕವಾಗಬಹುದು. ಈ ಹಿನ್ನೆಲೆಯಲ್ಲಿ ವಿಜ್ಞಾನದ ಇತರ ಜ್ಞಾನಶಾಖೆಗಳ ನೆರವು ಪಡೆದು ಪರಿಸರದ ಮೇಲಾಗುವ ಪ್ರಮಾಣ ಕಡಿಮೆ ಮಾಡಬಹುದು ಎಂದು ಪಿ. ಬಲರಾಂ ವಿಶ್ಲೇಷಿಸಿದರು.

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಯೋನಿಸಿಸ್ ವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹೈದರಾಬಾದ್‌ನ ಲೊಯಲೊ ಅಕಾಡಮಿಯ ನಿರ್ದೇಶಕ ಡಾ.ಕಾಶ್ಮೀರ್ ಮಾತನಾಡಿದರು.

ಪದವಿ ಹಾಗೂ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಿಚರ್ಡ್ ಗೋಸ್ಸಾಲ್ವೆಸ್, ಪ್ರೊ. ರಾಜಗೋಪಾಲ ಭಟ್, ಸಂಚಾಲಕ ಡಾ. ರೊನಾಲ್ಡ್ ನಝರತ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಸ್ವೀಬರ್ಟ್ ಡಿಸಿಲ್ವ ಸ್ವಾಗತಿಸಿದರು. ಡಿಡಿಯು ಕೌಶಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ಪ್ರವೀಣ್ ಮಾರ್ಟಿಸ್ ವಂದಿಸಿದರು.

ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಭಾಗವಹಿಸಿದ್ದ ಸಮ್ಮೇಳನದಲ್ಲಿ ಜಪಾನ್, ಥೈವಾನ್, ಬೆಲ್ಜಿಯಂನ ಪ್ರಮುಖ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು, ಇಸ್ರೋ ಮತ್ತಿತರ ದೇಶದ ಪ್ರತಿಷ್ಠಿತ ವೈಜ್ಞಾನಿಕ ಸಂಘ ಸಂಸ್ಥೆಗಳ ಗಣ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News