×
Ad

ರಾಜ್ಯದ 6 ಜಿಲ್ಲೆಗಳಲ್ಲಿ ಹೊಸ ಸರಕಾರಿ ವೈದ್ಯಕೀಯ ಕಾಲೇಜು: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್

Update: 2017-02-28 21:32 IST

ಉಡುಪಿ, ಫೆ.28: ಕಳೆದ ವರ್ಷ ಆರು ಜಿಲ್ಲೆಗಳಲ್ಲಿ ಪ್ರಾರಂಭಗೊಂಡ ಸರಕಾರಿ ವೈದ್ಯಕೀಯ ಕಾಲೇಜುಗಳೊಂದಿಗೆ ರಾಜ್ಯದಲ್ಲೀಗ ಒಟ್ಟು 16 ವೈದ್ಯಕೀಯ ಕಾಲೇಜುಗಳಿವೆ. ಈ ವರ್ಷ ಇನ್ನೂ ಆರು ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಸಿದ್ಧತೆಗಳು ನಡೆದಿವೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಮಣಿಪಾಲ ವಿವಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಹೊಟೇಲ್ ವ್ಯಾಲಿವ್ಯೆನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ಕಳೆದ ವರ್ಷ ಗುಲ್ಬರ್ಗ, ಕೊಪ್ಪಳ, ಗದಗ, ಚಾಮರಾಜ ನಗರ, ಕೊಡಗು ಹಾಗೂ ಕಾರವಾರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಇವೆಲ್ಲವೂ ಹಿಂದುಳಿದ ಪ್ರದೇಶಗಳಾಗಿವೆ. ಅಲ್ಲೀಗ ಕಾಲೇಜುಗಳು ತಲೆ ಎತ್ತಿವೆ. ಈ ಬಾರಿಯ ಬಜೆಟ್‌ನಲ್ಲಿ ಇನ್ನೂ ಆರು ಕಾಲೇಜುಗಳನ್ನು ಪ್ರಾರಂಭಿಸುವ ಘೋಷಣೆ ಮಾಡಲಾಗುತ್ತದೆ. ಬಾಗಲಕೋಟೆ, ಹಾವೇರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಕಾಲೇಜುಗಳು ಸ್ಥಾಪನೆಗೊಳ್ಳಲಿವೆ ಎಂದರು.

ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕಾಲೇಜುಗಳನ್ನು ಪ್ರಾರಂಭಿಸುವುದರಿಂದ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಲು ಸಾಧ್ಯವಾಗಲಿದೆ. ಇದರೊಂದಿಗೆ ಅಲ್ಲಿ ತಜ್ಞ ವೈದ್ಯರೂ ದೊರೆಯಲಿದ್ದಾರೆ. ಈ ಮೂಲಕ ಜಿಲ್ಲೆಯ ಬಡ ಜನರಿಗೆ, ಹಿಂದುಳಿದವರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ನೀಡಲು ಸಾಧ್ಯವಾಗಲಿದೆ ಎಂದವರು ನುಡಿದರು.

ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದರಿಂದ ಮೆರಿಟ್ ಕೋಟಾದಲ್ಲಿ ಹೆಚ್ಚು ಸೀಟುಗಳು ಲಭ್ಯವಾಗಲಿದ್ದು, ಅವುಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವುದರಿಂದ ಉತ್ತಮ ವೈದ್ಯರು ಬರಲು ಸಾಧ್ಯವಾಗುತ್ತದೆ. ಅಲ್ಲದೇ ದುಬಾರಿ ವೈದ್ಯಕೀಯ ಶಿಕ್ಷಣ ಪಡೆಯಲು ಸಾದ್ಯವಾಗದ ಜಿಲ್ಲೆಯ ಬಡ ಮಕ್ಕಳಿಗೆ ಸರಕಾರಿ ವೆಚ್ಚದಲ್ಲಿ ವೈದ್ಯರಾಗಲು ಸಾಧ್ಯವಾಗಲಿದೆ ಎಂಬುದು ನಮ್ಮ ಉದ್ದೇಶವಾಗಿದೆ. ಇದರೊಂದಿಗೆ ಬೌರಿಂಗ್ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜ್ ಆಗಿ ಪರಿವರ್ತಿಸಲು ಸಹ ಅನುಮತಿ ದೊರಕಿದೆ ಎಂದರು.

  ಅಲ್ಲದೇ ರಾಜ್ಯದಲ್ಲಿ ಸರಕಾರದ ವತಿಯಿಂದಲೇ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹುಬ್ಬಳ್ಳಿ ಮತ್ತು ಬಳ್ಳಾರಿಗಳಲ್ಲಿ ಸ್ಥಾಪಿಸಲಾಗುತ್ತದೆ. ಬೆಂಗಳೂರಿನ ಜಯದೇವ ಆಸ್ಪತ್ರೆ ಹೃದಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಸೇವೆ ನೀಡುತಿದ್ದು, ಇದರಿಂದ ರಾಜ್ಯದ ಬಡ ಜನರೂ ಕೈಗಟುಕ ದರದಲ್ಲಿ ಚಿಕಿತ್ಸೆ ಪಡೆಯಲು ಸಾದ್ಯವಾಗಿದೆ ಎಂದು ಡಾ.ಪಾಟೀಲ್ ಹೇಳಿದರು.

ಜಯದೇವ ಆಸ್ಪತ್ರೆಯ ಶಾಖೆಯನ್ನು ಮೈಸೂರು ಮಾತ್ರವಲ್ಲದೇ ಈಗ ಗುಲ್ಬರ್ಗದಲ್ಲೂ ಪ್ರಾರಂಭಿಸಲಾಗಿದೆ. ಇದು ಉತ್ತರ ಕರ್ನಾಟಕ ಭಾಗದ ಜನತೆಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಗುಲ್ಬರ್ಗ ಆಸುಪಾಸಿನ ಜನರು ಈಗ ಹೃದಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರಬೇಕಾಗಿಲ್ಲ. ಎಲ್ಲವೂ ಅಲ್ಲೇ ದೊರೆಯುತ್ತಿದೆ. ಈ ವರ್ಷ ಜಯದೇವದ ಇನ್ನೊಂದು ಶಾಖೆಯನ್ನು ಹುಬ್ಬಳ್ಳಿಯ ಕಿಮ್ಸ್ ಕ್ಯಾಂಪಸ್‌ನಲ್ಲಿ ಆರಂಭಿಸಲಾಗುವುದು ಎಂದರು.

ಅಲ್ಲದೇ ಕ್ವಿದಾಯಿ ಕ್ಯಾನ್ಸರ್ ಆಸ್ಪತ್ರೆಯ ಶಾಖೆಯೊಂದನ್ನು ಗುಲ್ಬರ್ಗದಲ್ಲಿ ಪ್ರಾರಂಭಿಸಿದ್ದೇವೆ. ಮುಂದಿನ ತಿಂಗಳು ಇದರ ಉದ್ಘಾಟನೆಯಾಗಲಿದೆ. ಕೇಂದ್ರ ಸರಕಾರದ ನೆರವು ಪಡೆದು 120 ಕೋಟಿ ರೂ.ವೆಚ್ಚದಲ್ಲಿ ಕಿದ್ವಾಯಿ ಆಸ್ಪತ್ರೆಯನ್ನು ಅಪ್‌ಗ್ರೇಡ್ ಮಾಡುವ ಪ್ರಕ್ರಿಯೆ ಶೀಘ್ರ ಪ್ರಾರಂಭಗೊಳ್ಳಲಿದೆ ಎಂದು ಅವರು ನುಡಿದರು.

 ಮೈಸೂರು ಮತ್ತು ಗುಲ್ಬರ್ಗಗಳಲ್ಲಿ ಎರಡು ಟ್ರೋಮಾ ಸೆಂಟರ್‌ಗಳು ತಲೆ ಎತ್ತಲಿವೆ. ಅವುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಿಂದ ನಮಗೆ 900ಕ್ಕೂ ಅಧಿಕ ಮೆರಿಟ್ ಸೀಟುಗಳು ದೊರಕಿವೆ. ಅಲ್ಲದೇ ಈ ಮೊದಲೇ ಇದ್ದ ಕಾಲೇಜುಗಳ ಸೀಟು ಸಾಮರ್ಥ್ಯವನ್ನು 100ರಿಂದ 150ಕ್ಕೆ ಏರಿಸಲು ಎಂಸಿಐನಿಂದ ಅನುಮತಿ ದೊರಕಿದೆ. ಈ ವರ್ಷ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 120 ಬೆಡ್‌ಗಳ ಹೊಸ ಅತ್ಯಾಧುನಿಕ ಟ್ರೋಮಾ ಸೆಂಟರ್‌ನ್ನು ಪ್ರಾರಂಭಿಸಲಾಗಿದೆ ಎಂದರು.

ಉಡುಪಿಯಲ್ಲೂ ಮೆಡಿಕಲ್ ಕಾಲೇಜು ಆರಂಭಿಸಲು ಬೇಡಿಕೆ ಇದ್ದರೂ, ಸದ್ಯಕ್ಕೆ ಘೋಷಣೆಯಾದಲ್ಲಿ ಮೊದಲು ಕಾಲೇಜು ಆರಂಭಗೊಳ್ಳಲಿದೆ. ಉಡುಪಿಯ ಸರದಿ ಮುಂದೆ ಬರಲಿದೆ ಎಂದರು. ಉಡುಪಿಯಲ್ಲಿ ಸರಕಾರವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದನ್ನು ಬಿಟ್ಟು ಖಾಸಗಿಯವರಿಗೆ ಯಾಕೆ ಒಪ್ಪಿಸಿದ್ದೀರಿ ಎಂದು ಪ್ರಶ್ನಿಸಿದಾಗ, ನಗರದ ಹೊರಗೆ ಇದು ಯಶಸ್ವಿಯಾಗದ ಕಾರಣ- ಉದಾಹರಣೆಗೆ ರಾಯಚೂರು- ಸೇವಾ ಮನೋಭಾವದ ಖಾಸಗಿಯವರೊಂದಿಗೆ ಸೇರಿ ಇದನ್ನು ನಿರ್ಮಿಸುತಿದ್ದೇವೆ ಎಂದರು.

ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News