×
Ad

ಮಂಗಳೂರು: ಬಟ್ಟೆ ವ್ಯಾಪಾರಿಯ ಲೂಟಿಗೈದ ಇಬ್ಬರ ಸೆರೆ

Update: 2017-02-28 21:37 IST

ಮಂಗಳೂರು, ಫೆ.28: ಬಟ್ಟೆ ವ್ಯಾಪಾರಿಯೊಬ್ಬನನ್ನು ಬೈಕ್‌ನಲ್ಲಿ ಬಂದು ತಡೆದು ನಿಲ್ಲಿಸಿದ್ದಲ್ಲದೆ, ಚೂರಿ ತೋರಿಸಿ ಜೀವಬೆದರಿಕೆ ಹಾಕಿ 30,300 ರೂ. ನಗದು ಸಹಿತ ಮೊಬೈಲ್ ಲೂಟಿಗೈದು ಪರಾರಿಯಾಗಿದ್ದ ಇಬ್ಬರನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವಾಮಂಜೂರಿನ ತಿರುವೈಲು ನಿವಾಸಿ ಮುಹಮ್ಮದ್ ಆಸೀಫ್ (29) ಮತ್ತು ವಾಮಂಜೂರಿನ ಮುಹಮ್ಮದ್ ಆರೀಫ್ (23) ಬಂಧಿತ ಆರೋಪಿಗಳು. ಇವರಿಂದ 4,500 ರೂ. ನಗದು ಮತ್ತು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಚೂರಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬೇರೆ ಬೇರೆ ಕಡೆ ಅಪರಾಧ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ವಾಮಂಜೂರಿನ ರಿಕ್ಷಾ ಚಾಲಕ ಸ್ವಾನ್ (25) ನಾಪತ್ತೆಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಪ್ರಸ್ತುತ ಅತ್ತಾವರ ನಿವಾಸಿಗಳಾದ ವೇಲು ಮುರುಗನ್ ಮತ್ತು ಸುಬ್ರಮಣಿ ಎಂಬವರು ಫೆ.21ರಂದು ಬೈಕ್‌ನಲ್ಲಿ ನೀರುಮಾರ್ಗ, ಬೈತುರ್ಲಿ, ಪೆರ್ಮಂಕಿ, ಉಳಾಯಿಬೆಟ್ಟುವಿನಲ್ಲಿ ಬಟ್ಟೆ ವ್ಯಾಪಾರ ಮುಗಿಸಿ ಸಂಜೆ 5:30ಕ್ಕೆ ಬಿತ್ತ್‌ಪಾದೆ ಸಮೀಪ ತೆರಳುತ್ತಿದ್ದಾಗ ಬೈಕೊಂದರಲ್ಲಿ ಬಂದ 3 ಮಂದಿ ಇವರ ಬೈಕನ್ನು ಅಡ್ಡ ಹಾಕಿ ಚೂರಿ ತೋರಿಸಿ ಜೀವಬೆದರಿಕೆ ಒಡ್ಡಿ ಹಣಕ್ಕಾಗಿ ಒತ್ತಾಯಿಸಿದ್ದಾರೆ.

ಹಾಗೇ ಸುಬ್ರಮಣಿಯ ಬಳಿಯಿದ್ದ 25 ಸಾವಿರ ರೂ. ಮತ್ತು ವೇಲು ಮುರುಗನ್ ಬಳಿಯಿದ್ದ 5,300 ರೂ. ಹಾಗೂ ಮೊಬೈಲ್ ದೋಚಿದ್ದಾರೆ. ಬಳಿಕ ದುಷ್ಕರ್ಮಿಗಳು ನೀರುಮಾರ್ಗ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಗ್ರಾಮಾಂತರ ಪೊಲೀಸರು ಸಂಶಯದ ಮೇರೆಗೆ ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಶ್ರುತಿ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಠಾಣೆಯ ನಿರೀಕ್ಷಕ ಮುಹಮ್ಮದ್ ಶರ್ೀ, ಎಸ್ಸೈ ಸುಧಾಕರ್, ವೆಂಕಟೇಶ್, ಅಪರಾಧ ವಿಭಾಗದ ಎಸ್ಸೈ ಹರೀಶ್ ವಿ. ಮತ್ತು ಚಂದ್ರಶೇಖರ್ ಆಚಾರ್ಯ, ಎಚ್‌ಸಿ ಸುಭಾಶ್ಚಂದ್ರ, ಮೋಹನ್, ಪಿಸಿಗಳಾದ ಕುಶಲ್ ಹೆಗ್ಡೆ, ರಫೀಕ್, ಸದಾಶಿವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News