×
Ad

ಉಡುಪಿ ಎಪಿಎಂಸಿಗೆ ನಿರಂಜನ ಹೆಗ್ಡೆ ಅಧ್ಯಕ್ಷ, ರಾಘವೇಂದ್ರ ಉಪಾಧ್ಯಕ್ಷರಾಗಿ ಆಯ್ಕೆ

Update: 2017-02-28 22:03 IST

ಉಡುಪಿ, ಫೆ.28: ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಬಾರಕೂರು ಕ್ಷೇತ್ರದ ನಿರಂಜನ ಹೆಗ್ಡೆ ಅಧ್ಯಕ್ಷರಾಗಿ ಹಾಗೂ ಮಣಿಪಾಲ ಕ್ಷೇತ್ರದ ರಾಘವೇಂದ್ರ ನಾಯ್ಕೆ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಉಡುಪಿ ಎಪಿಎಂಸಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು, ಆಯ್ಕೆಯಾದ ಇಬ್ಬರು ಸಹ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಇಂದು ನಡೆದ ನೂತನ ಎಪಿಎಂಸಿ ಸಮಿತಿಯ ಪ್ರಥಮ ಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

 ಇಂದಿನ ಸಭೆಯಲ್ಲಿ ಎಪಿಎಂಸಿಯ 13 ಮಂದಿ ಚುನಾಯಿತ ಸದಸ್ಯರು ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು. ಬೆಳಗ್ಗೆ 11:00ರಿಂದ ಅಪರಾಹ್ನ 1:00ರವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ನಿಗದಿಯಾಗಿದ್ದು, ಈ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿರಂಜನ ಹೆಗ್ಡೆ ಹಾಗೂ ಶಿರ್ವ ಕ್ಷೇತ್ರದ ಕಿರಣ್‌ಕುಮಾರ್ ತಮ್ಮ ನಾಮಪತ್ರ ಸಲ್ಲಿಸಿದ್ದರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ನಾಯ್ಕೆ ಅವರ ಏಕೈಕ ನಾಮಪತ್ರ ಸಲ್ಲಿಕೆಯಾಗಿತ್ತು.

ಅಪರಾಹ್ನ 3:00ರವೆರೆಗ ನಾಮಪತ್ರ ಹಿಂದೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಯಾರೂ ನಾಮಪತ್ರ ವಾಪಾಸು ಪಡೆಯದ ಕಾರಣ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಿರ್ಧರಿಸಲಾಯಿತು. ಮತದಾನ ಪ್ರಕ್ರಿಯೆಯ ಬಳಿಕ ಮತಗಳ ಎಣಿಕೆ ನಡೆದಾಗ ನಿರಂಜನ್ ಹೆಗ್ಡೆ 9 ಮತಗಳನ್ನು ಪಡೆದು ಜಯಶಾಲಿಯಾದರೆ, ಕಿರಣ್‌ಕುಮಾರ್ 7 ಮತಗಳನ್ನು ಪಡೆದರು.

ಅಧ್ಯಕ್ಷರಾಗಿ ನಿರಂಜನ ಹೆಗ್ಡೆ ಆಯ್ಕೆಯನ್ನು ಘೋಷಿಸಿದ ಚುನಾವಣಾಧಿಕಾರಿ, ಉಪಾಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ನಾಯ್ಕೆ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News