12 ವರ್ಷಗಳ ಬಳಿಕ ಸ್ಪಿರಿಟ್ ಸಾಗಾಟ ಆರೋಪಿಯ ಬಂಧನ
Update: 2017-03-01 14:46 IST
ಕಾಸರಗೋಡು, ಮಾ.1: ಸ್ಪಿರಿಟ್ ಸಾಗಾಟ ವೇಳೆ ಅಬಕಾರಿ ಅಧಿಕಾರಿಗಳಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು 12 ವರ್ಷಗಳ ನಂತರ ಸೆರೆ ಹಿಡಿಯಲಾಗಿದೆ. ಪಟ್ಟಾಂಬಿ, ತೆಕ್ಕುಮುರಿಯ ರಾಮಚಂದ್ರ (42) ಬಂಧಿತ ಆರೋಪಿ. ಮುಳ್ಳೇರಿಯ ಅಬಕಾರಿ ಅಧಿಕಾರಿಗಳು ಈತನ ಮನೆಯಿಂದ ಬಂಧಿಸಿದ್ದಾರೆ.
ಅಂಬಾಸಿಡರ್ ಕಾರಿನಲ್ಲಿ ಸ್ಪಿರಿಟ್ ಸಾಗಿಸುತ್ತಿದ್ದಾಗ ಬೋವಿಕ್ಕಾನ ಪರಿಸರದಲ್ಲಿ ಕಾರನ್ನು ತಡೆದು ನಿಲ್ಲಿಸಲಾಯಿತು. ಈ ವೇಳೆ ರಾಮಚಂದ್ರನ್ ಓಡಿ ಪರಾರಿಯಾಗಿದ್ದು, ಆತನೊಂದಿಗಿದ್ದ ಇನ್ನೋರ್ವನನ್ನು ಬಂಧಿಸಲಾಗಿತ್ತು. ರಾಮಚಂದ್ರನ್ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿ ವಿವಿಧ ಕಡೆಗಳಲ್ಲಿ ನಕಲಿ ಹೆಸರು ಬಳಸಿ ಕೆಲಸ ಮಾಡುತ್ತಿದ್ದ. ಹಲವು ಬಾರಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರೂ ಈತನನ್ನು ಸೆರೆಹಿಡಿಯಲಾಗಲಿಲ್ಲ. ಈ ನಡುವೆ ಈತ ಮನೆಗೆ ತಲಪಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ದಳ ಸಿಬ್ಬಂದಿ ಬುಧವಾರ ಬೆಳಗ್ಗೆ ಈತನನ್ನು ಬಂಧಿಸಿದರು .