×
Ad

ಕನ್ನಡ ಶಾಲೆಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ಅಗತ್ಯ: ಶಾಸಕ ಸೊರಕೆ

Update: 2017-03-01 18:14 IST

ಉಡುಪಿ, ಮಾ.1: ಮುಚ್ಚುತ್ತಿರುವ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪೋಷಕರು ಹಾಗೂ ಮಕ್ಕಳ ನಿರೀಕ್ಷೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಬೇಕು ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸರಕಾರಿ ಶಾಲೆಗಳ ಉಳಿವಿಗೆ ಯಾವ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಸೊರಕೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್, ಸರಕಾರಿ ಶಾಲೆಗಳಲ್ಲೂ ಒಂದನೆ ತರಗತಿಯಿಂದ ಆಂಗ್ಲ ಭಾಷೆಯನ್ನು ಕಲಿಸಲಾಗುತ್ತಿದ್ದು, ಇದಕ್ಕೆ ನುರಿತ ಶಿಕ್ಷಕ ರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಎಲ್ಲ ರೀತಿಯ ಸೌಲಭ್ಯಗಳನ್ನು ಸರಕಾರದಿಂದ ನೀಡಲಾಗುತ್ತಿದೆ. ಪರೀಕ್ಷೆ ಮುಗಿದ ಬಳಿಕ ಎಪ್ರಿಲ್ ತಿಂಗಳಲ್ಲಿ ಶಿಕ್ಷಕರು ಮನೆಮನೆಗಳಿಗೆ ತೆರಳಿ ಪೋಷಕ ರ ಮನವೊಲಿಸಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಮಾಡಲಿದ್ದಾರೆ ಎಂದರು.

ಇಂದು ಆಂಗ್ಲ ಮಾಧ್ಯಮ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಲಾಗು ತ್ತಿದೆ. ಅದೇ ರೀತಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಅಭಿ ಪ್ರಾಯ ವ್ಯಕ್ತವಾಯಿತು.

ಶಾಲೆಯ ಹಳೆವಿದ್ಯಾರ್ಥಿ ಸಂಘಗಳು ಕೂಡ ಆಸಕ್ತಿ ವಹಿಸಿ ಶಾಲೆಗೆ ಹೆಚ್ಚಿನ ಮಕ್ಕಳು ಬರುವಂತೆ ಮಾಡಬೇಕು ಎಂದು ಸೊರಕೆ ಹೇಳಿದರು. ರವಿಶಂಕರ್ ಪ್ರತಿಕ್ರಿಯಿಸಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ಒಂದು ಪಠ್ಯವಾಗಿ ಕಲಿಸಲು ಅವಕಾಶವಿದೆಯೇ ಹೊರತು ಮಾಧ್ಯಮವಾಗಿ ಅಲ್ಲ ಎಂದು ತಿಳಿಸಿದರು.

ತಾಲೂಕಿನಲ್ಲಿ ನಿವೇಶನ ರಹಿತರಿಗೆ ನೀಡಲು ಗುರುತಿಸಿರುವ ಭೂಮಿಯ ಕುರಿತು ಸೊರಕೆ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಬ್ರಹ್ಮಾವರ ವಿಶೇಷ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್, ಕೆಲವು ಕಡೆ ಭೂಮಿ ಇದ್ದರೂ ಡೀಮ್ಡ್ ಫಾರೆಸ್ಟ್ ಸಮಸ್ಯೆ ಎದುರಾಗುತ್ತಿದೆ ಎಂದರು.

ವಿವಿಧ ಇಲಾಖೆಗಳ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ನಡೆಸಬೇಕು. ಇದಕ್ಕೆ ಆಯಾ ಗ್ರಾಪಂ ಅಧ್ಯಕ್ಷರನ್ನು ಹಾಗೂ ವಿವಿಧ ಇಲಾಖೆ ಅಧಿಕಾರಿಗಳನ್ನು ಕರೆಯಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ತಹಶೀಲ್ದಾರ್, ಮುಂದಿನ ವಾರದಿಂದ ಸಭೆ ನಡೆಸಲಾ ಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ 11 ಕಿಂಡಿ ಅಣೆಕಟ್ಟು ಕಾಮಗಾರಿಗಳಲ್ಲಿ ಏಳು ಪೂರ್ಣ ಗೊಂಡಿದ್ದು, ನಾಲ್ಕು ಪ್ರಗತಿಯಲ್ಲಿವೆ. ಪ್ರವಾಹ ನಿಯಂತ್ರಣ ಕಾಮಗಾರಿ ಯಲ್ಲಿ ಮೂರು ಪೂರ್ಣಗೊಂಡರೆ ಆರು ಪ್ರಗತಿಯಲ್ಲಿದೆ ಎಂದು ಸಣ್ಣ ನೀರಾವರಿ ಇಲಾಖಾಧಿಕಾರಿ ಮಾಹಿತಿ ನೀಡಿದರು.

ಪಡುಬಿದ್ರಿ ಮದ್ಮಲ್‌ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಆ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಆರೋಪಿಸಿದರು. ಈ ಕಾಮಗಾರಿಯನ್ನು ಕೂಡಲೇ ಪರಿಶೀಲಿಸಿ ಪೂರ್ಣ ಗೊಳಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಇದಕ್ಕೆ ಮೆಸ್ಕಾಂ ಇಲಾಖೆಯವರು ಕೂಡ ಸಹಕಾರ ನೀಡಬೇಕು ಎಂದರು. ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಯೋಜನೆಯನ್ನು ರೂಪಿಸುವಂತೆ ಸೊರಕೆ ಅರಣಾಧಿಕಾರಿಗಳಿಗೆ ತಿಳಿಸಿದರು. ಸದ್ಯದಲ್ಲೇ ಯೋಜನೆ ತಯಾರಿಸಿ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಹೇಳಿದರು.

ಸಭೆಯಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಜಿಪಂ ಸದಸ್ಯರಾದ ಸುಧಾಕರ್ ಶೆಟ್ಟಿ, ವಿಲ್ಸನ್ ರೋಡಿಗ್ರಸ್, ಶಿಲ್ಪ ಸುವರ್ಣ, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಉಪಸ್ಥಿತರಿದ್ದರು.

ನಂದಿಕೂರು ಬೆಂಕಿ: ಪರಿಹಾರಕ್ಕೆ ಸೂಚನೆ

ನಂದಿಕೂರು ಪ್ರದೇಶದಲ್ಲಿ ಕೆಪಿಟಿಸಿಎಲ್ ತಾಂತ್ರಿಕ ತೊಂದರೆಯಿಂದ ಬೆಂಕಿ ಆಕಸ್ಮಿಕ ಉಂಟಾಗಿ ಕೃಷಿಕರ ಭೂಮಿಗೆ ಹಾನಿಯಾಗಿದೆ. ಆದುದರಿಂದ ಇದನ್ನು ಪರಿಶೀಲಿಸಿ ಕೆಪಿಟಿಸಿಎಲ್‌ನಿಂದ ರೈತರಿಗೆ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ವಿನಯ ಕುಮಾರ್ ಸೊರಕೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ನಂದಿಕೂರು ಪರಿಸರದಲ್ಲಿ ವಿದ್ಯುತ್ ತಂತಿಗಳು ತುಕ್ಕು ಹಿಡಿದು ಮುರಿದು ಬೀಳುತ್ತಿವೆ. ಇದನ್ನು ಸರಿಯಾಗಿ ಜೋಡಿಸುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News