×
Ad

ಸುಳ್ಯಪದವು ಬಾರ್‌ನಲ್ಲಿ ಕಾರ್ಮಿಕನ ಸಾವು: ಕಾನತ್ತೂರು ದೈವಸ್ಥಾನದಲ್ಲಿ ಪ್ರಮಾಣ ಮಾಡಲು ಆಗ್ರಹ

Update: 2017-03-01 18:40 IST

ಪುತ್ತೂರು, ಮಾ.1: ಪುತ್ತೂರು ತಾಲ್ಲೂಕಿನ ಸುಳ್ಯಪದವಿನಲ್ಲಿರುವ ವಿನ್ಯಾಸ್ ಬಾರ್‌ನಲ್ಲಿ ಬಡ ಕೂಲಿ ಕಾರ್ಮಿಕ, ದಲಿತ ಸಮುದಾಯಕ್ಕೆ ಸೇರಿದ ಕೇಶವ ಅವರನ್ನು ಬಾರ್‌ನ ಕೆಲಸಗಾರರು ಹಲ್ಲೆ ನಡೆಸಿ, ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿದ್ದು ಸತ್ಯವಾಗಿದ್ದು, ಈ ಬಗ್ಗೆ ಕಾನತ್ತೂರು ಕ್ಷೇತ್ರದಲ್ಲಿ ಪ್ರಮಾಣ ಮಾಡಲಿ ಎಂದು ಹೇಳಿಕೆ ನೀಡಿರುವ ಬಾರ್‌ನ ಮಾಲಕ ವಿಠ್ಠಲ ರೈ ಅವರು ಕಾನತ್ತೂರು ದೈವಸ್ಥಾನದಿಂದ ಸತ್ಯ ಪ್ರಮಾಣಕ್ಕೆ ನೋಟೀಸು ಮಾಡಲಿ, ನಾವು ಅಲ್ಲಿಗೆ ಹೋಗಿ ಪ್ರಮಾಣ ಮಾಡಲು ಸಿದ್ಧ ಎಂದು ದ.ಕ.ಜಿಲ್ಲಾ ಸೌಹಾರ್ದ ಸಮಿತಿಯ ಅಧ್ಯಕ್ಷ ಪ್ರದೀಪ್ ರೈ ಪಾಂಬಾರು ಅವರು ಪ್ರತ್ಯುತ್ತರ ನೀಡಿದ್ದಾರೆ.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಶವ ಅವರನ್ನು ಬಾರ್‌ನ ಕೆಲಸದಾಳುಗಳು ಕೊಲೆ ಮಾಡಿರುವುದು ಸತ್ಯವಾಗಿರದಿದ್ದಲ್ಲಿ, ಅವರು ತಪ್ಪು ಮಾಡಿರದಿದ್ದರೆ ಬಾರ್‌ನ ಮಾಲಕಿ ನಯನಾ ರೈ ಅವರ ಪತಿ ವಿಠ್ಠಲ ರೈ ಅವರು ತನ್ನ ಮತ್ತು ಮೃತ ಕೇಶವರ ತಂದೆಯ ಬಳಿಕೆ ಪಂಚಾಯಿತಿ ಮಾಡಿ ಪ್ರಕರಣವನ್ನು ಮುಗಿಸಲು ಜನ ಕಳುಹಿಸಿ ಕೇಸು ಮಾಡಬೇಡಿ, ರಾಜಿಯಲ್ಲಿ ಪ್ರಕರಣವನ್ನು ಮುಗಿಸಿಕೊಡಿ ,ಅದಕ್ಕೆ ನಾವು ಹಣ ನೀಡುತ್ತೇವೆ ಎಂದು ಹೇಳಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು.

ಈ ಹಿಂದೆ ದರ್ಬೆಯ ವಿನ್ಯಾಸ್ ಬಾರ್‌ನಲ್ಲಿ ವಿಠಲ ರೈ ಮತ್ತು ಬಾರ್‌ನ ಕೆಲಸದಾಳುಗಳು ಸೇರಿಕೊಂಡು ವಿಠಲ ರೈ ಅವರ ಸ್ವಂತ ಅಣ್ಣನಾದ ಸೀತಾರಾಮ ರೈ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ,ಮಾನಸಿಕ ಹಿಂಸೆ ನೀಡಿದ ಪರಿಣಾಮವಾಗಿ ಅವರು ಅನಾರೋಗ್ಯಕ್ಕೊಳಗಾಗಿ ಮೃತಪಟ್ಟಿದ್ದರು. ಸೀತಾರಾಮ ರೈ ಅವರು ನಿಧನರಾದ ಬಳಿಕ ಇದೇ ವಿಠ್ಠಲ  ರೈ ಅವರು ಗೂಂಡಾಗಳನ್ನು ಕರೆತಂದು ಮೃತ ಅಣ್ಣನ ಪತ್ನಿ ಮಕ್ಕಳನ್ನು ಮನೆಯಿಂದ ಹೊರಹಾಕಿ, ಸೀತಾರಾಮ ರೈ ಅವರು ಮಕ್ಕಳ ಹೆಸರಿನಲ್ಲಿ ಮಾಡಿಟ್ಟಿದ್ದ ಆಸ್ತಿ ವೀಲ್‌ನ ಸಾಕ್ಷಿದಾರರಿಗೆ ಹಣದ ಆಮಿಷ ತೋರಿಸಿ, ಸಾಕ್ಷಿ ನಾಶಪಡಿಸಿ ಅವರ ಪತ್ನಿ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

 12 ವರ್ಷದ ಹಿಂದೆ ಇದೇ ಬಾರ್‌ನಲ್ಲಿ ನೆಲ್ಲಿಕಟ್ಟೆಯ ಡೆನ್ನಿಸ್ ಎಂಬಾತನಿಗೂ ರೀಪಿನಿಂದ ಹೊಡೆದು ಸಾಯಿಸಲಾಗಿದೆ. ಮೂರು ವರ್ಷದ ಹಿಂದೆ ಅನಾಥ ಭಿಕ್ಷುಕನೊಬ್ಬನಿಗೂ ಹಲ್ಲೆ ನಡೆಸಲಾಗಿದ್ದು, ಆತ ಮುಕ್ರಮಂಪಾಡಿ ಎಂಬಲ್ಲಿಗೆ ಹೋಗಿ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಭಿಕ್ಷುಕನಿಗೆ ಬನಿಯಾನಿ ವಸ್ತ್ರ ತೊಡಿಸಿ ಕಳುಹಿಸಿದ್ದ ಹುಡುಗರ ಮೇಲೆ ಕೇಸು ಆಗಿತ್ತು ಎಂದು ಆರೋಪಿಸಿದ ಪ್ರದೀಪ್ ರೈ, ಅವರು ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ಪ್ರಮಾಣ ಮಾಡಲು ಕಾನತ್ತೂರು ಕ್ಷೇತ್ರದಿಂದ ನೋಟೀಸು ಕಳುಹಿಸಲಿ, ನಾನು ಅನ್ಯಾಯಕ್ಕೊಳಗಾದವರನ್ನು ಅಲ್ಲಿಗೆ ಕರೆತಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದರು.

ಅಲವತ್ತುಕೊಂಡು ಕಣ್ಣೀರಿಟ್ಟ ಮಹಿಳೆ:

ಕಾಣಿಯೂರು ಗ್ರಾಮದ ಮಾಳ ಎಂಬಲ್ಲಿದ್ದ ತನ್ನ ಪತಿಗೆ ಸೇರಿದ್ದ ಸುಮಾರು ರೂ.75 ಲಕ್ಷ  ರೂ. ಮೌಲ್ಯದ ಕೃಷಿಭೂಮಿಯನ್ನು ಪತಿಯ ತಮ್ಮನಾದ ವಿಠ್ಠಲ ರೈ ತಮ್ಮಿಂದ ಬಲವಂತವಾಗಿ ಸ್ವಾಧೀನ ಪಡಿಸಿಕೊಂಡು ತನಗೆ ಮತ್ತು ತನ್ನ ಇಬ್ಬರು ಮಕ್ಕಳಾದ ತ್ರಿಶಾಂತ್ ರೈ ಮತ್ತು ತ್ರಿಶೋದ್ ರೈಗೆ ಅನ್ಯಾಯ ಎಸಗುವ ಮೂಲಕ ಗತಿಯಿಲ್ಲದಂತೆ ಮಾಡಿದ್ದಾನೆ.

ಕಾಣಿಯೂರು ವಿಜಯ ಬ್ಯಾಂಕಿನಲ್ಲಿದ್ದ ತನ್ನ 5 ಪವನ್ ಚಿನ್ನದ ಸರವನ್ನು ತನಗೆ ಗೊತ್ತಿಲ್ಲದಂತೆ ಪಡೆದುಕೊಂಡು ವಂಚಿಸಿದ್ದಾನೆ ಎಂದು ಅಲವತ್ತುಕೊಂಡು ಕಣ್ಣೀರಿಟ್ಟ ಲತಾ ಎಸ್.ರೈ ಅವರು ಈ ಬಗ್ಗೆಯೂ ಕಾನತ್ತೂರು ದೈವಸ್ಥಾನದಲ್ಲಿ ಪ್ರಮಾಣ ನಡೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮಂಡಲ ಪಂಚಾಯಿತಿ ಸದಸ್ಯ ಅಂಬೋಡಿ ಅಮ್ಚಿನಡ್ಕ, ಮೃತ ಕೇಶವ ಅವರ ತಂದೆ ಬಾಬು ಮತ್ತು ಮೃತ ಕೇಶವ ಅವರ ಪತ್ನಿ ಸುಮಿತ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News