×
Ad

ಪಿಲಾರು ಪಲ್ಲದ ಗುಡ್ಡ ಪ್ರದೇಶಕ್ಕೆ ಬೆಂಕಿ: ನಿರಾಕರಿಸಿ, ಒತ್ತಡಕ್ಕೆ ಮಣಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ

Update: 2017-03-01 19:06 IST

ಉಳ್ಳಾಲ, ಮಾ.1: ತೊಕ್ಕೊಟ್ಟು ಸಮೀಪದ ಪಿಲಾರು ಪಲ್ಲದ ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು, ಬಳಿಕ ಇಲ್ಲಿಯ ಸಮೀಪದ ಮನೆಗಳು ಇರುವಂತಹ ಪ್ರದೇಶಕ್ಕೆ ಬೆಂಕಿ ಹರಡಿದಾಗ ಸ್ಥಳೀಯರು ಒತ್ತಡ ಹಾಕಿ ಅಗ್ನಿಶಾಮಕದಳದವರನ್ನು ಕರೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಕುಂಪಲ ಗುರುನಗರದ ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಕೆಳಭಾಗದಲ್ಲಿರುವ ಪಿಲಾರು ಪಳ್ಳದಲ್ಲಿ ಖಾಸಗಿ ಒಡೆತನದ ಎಕರೆಗಟ್ಟಲೆ ಗುಡ್ಡ ಪ್ರದೇಶವಿದ್ದು ಇಲ್ಲಿ ಮರಗಿಡಗಳು ಸಾಕಷ್ಟು ಬೆಳೆದು ನಿಂತಿವೆ. ಕಳೆದ ಎರಡು ತಿಂಗಳುಗಳಿಂದ ಈ ಪ್ರದೇಶದಲ್ಲಿ ಎರಡು ಬಾರಿ ಬೆಂಕಿ ತಗುಲಿತ್ತು.

ಬುಧವಾರ ಮಧ್ಯಾಹ್ನ ಸುಡುತ್ತಿದ್ದ ಬಿಸಿಲಿಗೆ ಈ ಪ್ರದೇಶದಲ್ಲಿ ಮತ್ತೆ ಬೆಂಕಿ ತಗುಲಿದ್ದು, ಈ ಬಾರಿ ಬೆಂಕಿಯ ಕೆನ್ನಾಲಿಗೆಯು ಸುಮಾರು ಎರಡು ಎಕರೆ ಪ್ರದೇಶಕ್ಕೆ ಹರಡಿತ್ತು.

ಜಾಗದ ಮಾಲಕರು ಮನೆಯಲ್ಲಿರದ ಕಾರಣ ಸ್ಥಳೀಯ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಮುಖ್ಯಸ್ಥರಾದ ರಾಜೇಶ್ ಪೂಜಾರಿ ಅವರು ಅಗ್ನಿಶಾಮಕ ಸೇವೆಗೆ ಕರೆ ಮಾಡಿದ್ದರು.

ಆರಂಭದಲ್ಲಿ ಅಗ್ನಿಶಾಮಕ ದಳದವರು ಖಾಸಗಿ ಸ್ಥಳಕ್ಕೆ ಬರಲು ನಿರಾಕರಿಸಿದರಾದರೂ ಬಳಿಕ ಒತ್ತಡಕ್ಕೆ ಜಾಗೃತಗೊಂಡ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಎಕರೆಗಟ್ಟಲೆ ಪ್ರದೇಶಕ್ಕೆ ವ್ಯಾಪಿಸಿದ ಬೆಂಕಿಯನ್ನು ಹರಸಾಹಸ ಪಟ್ಟು ನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News