ಪಂಚಾಯತ್‌ ರಾಜ್‌ಗೆ ವಿಶೇಷ ಒತ್ತು ನೀಡಿದ್ದೆ ರಾಜೀವ್ ಗಾಂಧಿ: ಪ್ರಮೋದ್ ಮಧ್ವರಾಜ್

Update: 2017-03-01 14:06 GMT

ಉಡುಪಿ, ಮಾ.1: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ವ್ಯವಸ್ಥೆಗೆ ವಿಶೇಷ ಒತ್ತು ನೀಡಿ ಜಾರಿಗೊಳಿಸುವ ಮೂಲಕ ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಱಗ್ರಾಮ ಸ್ವರಾಜ್ ಜಾಗೃತಿ ಅಭಿಯಾನೞವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಜ್ಯದ ಒಟ್ಟು 6,023 ಗ್ರಾಪಂಗಳ ಸೂಚ್ಯಂಕವನ್ನು ಇತ್ತೀಚೆಗೆ ಪ್ರಕಟಿಸ ಲಾಗಿದ್ದು, ಇದರಲ್ಲಿ ಬೆಂಗಳೂರು ನಗರ, ಉಡುಪಿ ಹಾಗೂ ದಕ್ಷಿಣ ಕನ್ನಡದ ಎಲ್ಲಾ ಗ್ರಾಪಂಗಳನ್ನು ಅಭಿವೃದ್ಧಿ ಹೊಂದಿದ ಗ್ರಾಮಪಂಚಾಯತ್‌ಗಳಾಗಿ ವರ್ಗೀಕರಿಸಲಾಗಿದೆ. ಇದರಿಂದ ಜಿಲ್ಲೆಯ ಗ್ರಾಪಂಗಳಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ಸದೃಢವಾಗಿರುವುದು ಗೊತ್ತಾಗುತ್ತದೆ ಎಂದವರು ನುಡಿದರು.

ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಭಾಗವಹಿಸಿದ ಎಐಸಿಸಿ ಪ್ರದಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಆದ ಆಸ್ಕರ್ ಫೆರ್ನಾಂಡೀಸ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ರಂಗಗಳಲ್ಲೂ ಸಮಸ್ತ ಜನರನ್ನು ಒಳಗೊಳಿಸುತ್ತಾ ಬೆಳೆದ ಕಾರಣ ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಅಭಿವೃದ್ಧಿ ಹೊಂದಿದ ಜಿಲ್ಲೆ ಎನಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಇಲ್ಲಿನ ಬ್ಯಾಂಕುಗಳು ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿ ರಾಷ್ಟ್ರ ಮಟ್ಟದಲ್ಲಿ ಬೆಳೆದವುಗಳು. ಸ್ಥಳೀಯ ಜನರ ಕೈಗೆ ಅಧಿಕಾರ ನೀಡಿದರೆ, ಗ್ರಾಮದ ಅಭಿವೃದ್ಧಿ ಸಾದ್ಯವಾಗುತ್ತದೆ ಎಂಬುದನ್ನು ಪಂಚಾಯತ್‌ರಾಜ್ ವ್ಯವಸ್ಥೆ ತೋರಿಸಿಕೊಟ್ಟಿದೆ ಎಂದು ಆಸ್ಕರ್ ಫೆರ್ನಾಂಡೀಸ್ ಹೇಳಿದರು.

ಸಭೆಯಲ್ಲಿ ರಾಜ್ಯದ ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಹಿರಿಯ ನಾಯಕರಾದ ನಾರಾಯಣ್ ಸ್ವಾಮಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವೆರೋನಿಕ ಕರ್ನೇಲಿಯೊ, ಪಂಚಾಯತ್‌ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ. ಸಂದೀಪ್, ವಲಯ ಸಂಚಾಲಕ ರಂಗಸ್ವಾಮಿ, ಬಾಲಾಜಿ ರಾವ್ ಖರೇ, ಪವನ್ ಗಾಂಧಿ, ಸರಳಾ ಕಾಂಚನ್, ನಿತ್ಯಾನಂದ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಲಕ್ಷ್ಮೀ ಭಟ್, ಸತೀಶ್ ಅಮೀನ್ ಪಡುಕೆರೆ, ಅಶೋಕ ಕೊಡವೂರು ಕೊಡವೂರು, ನರಸಿಂಹ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

 ಆರ್‌ಜಿಪಿಆರ್‌ಎಸ್ ಉಡುಪಿ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಸಹ ಸಂಯೋಜಕಿ ಮೇರಿ ಡಿಸೋಜ ವಂದಿಸಿದರು. ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಾಗಾರದಲ್ಲಿ ಆರ್‌ಜಿಪಿಆರ್‌ಎಸ್‌ನ ಸಂಯೋಜಕರು, ಬ್ಲಾಕ್ ಕಾಂಗ್ರೆಸ್/ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಜಿಪಂ ಹಾಗೂ ತಾಪಂ ಸದಸ್ಯರು ಹಾಗೂ ಅಭ್ಯರ್ಥಿಗಳು, ವಿವಿಧ ನಾಮ ನಿರ್ದೇಶಿತ ಸದಸ್ಯರುಗಳು, ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News