ಮಸೀದಿಗೆ ಕಲ್ಲು ತೂರಾಟ ನಡೆಸಿದ ಆರೋಪಿಗಳಿಗೆ ಜಾಮೀನು: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Update: 2017-03-01 13:57 GMT

ಉಡುಪಿ, ಮಾ.1: ಮುದರಂಗಡಿ ಮಸೀದಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣದ ಆರೋಪಿಗಳಿಗೆ ತಕ್ಷಣವೇ ಜಾಮೀನಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ಹಾಗೂ ಕೂಲಕಂಷ ತನಿಖೆ ನಡೆಸುವಂತೆ ಆಗ್ರಹಿಸಿ ಮುದರಂಗಡಿ ಮಸೀದಿ ಹಾಗೂ ವಿವಿಧ ಮುಸ್ಲಿಮ್ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಉಡುಪಿ ಜಿಲ್ಲಾ ಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇನ್ನಾ ಮಸೀದಿಯ ಅಧ್ಯಕ್ಷ ಹಾಗೂ ಮುಸ್ಲಿಮ್ ಮುಖಂಡ ಎಂ.ಪಿ.ಮೊದಿನಬ್ಬ, ಕೆಲವು ದಿನಗಳ ಹಿಂದೆ ಎಲ್ಲೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಪ್ರಚೋದನಕಾರಿ ಭಾಷಣ ಮಾಡಿ ಸ್ಥಳೀಯ ಯುವಕರಲ್ಲಿ ಕೋಮು ಧ್ವೇಷದ ವಿಷ ಬೀಜ ಬಿತ್ತಿರುವುದೇ ಮುದರಂಗಡಿ ಹಾಗೂ ಎಲ್ಲೂರಿನಲ್ಲಿ ನಡೆದ ಘಟನೆಗಳಿಗೆ ಕಾರಣ. ಆದುದರಿಂದ ಯಾವುದೇ ಕಾರಣಕ್ಕೂ ಹೊರಗಿನವರು ಬಂದು ಕೋಮುಧ್ವೇಷದ ಭಾಷಣ ಮಾಡದಂತೆ ನಿರ್ಬಂಧ ವಿಧಿಸಬೇಕು. ಕಾರ್ಯಕ್ರಮ ಆಯೋಜಕರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ಕಲ್ಲೆಸೆತ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದು, ಆರೋಪಿಗಳು ಮತ್ತೆ ರಾಜಾರೋಷವಾಗಿ ಪರಿಸರದಲ್ಲಿ ತಿರುಗಾಡುತ್ತ ಭಯದ ವಾತಾವರಣ ಸೃಷ್ಠಿಸುತ್ತಿದ್ದಾರೆ. ಇದರಿಂದ ಈ ಭಾಗದ ಮುಸ್ಲಿಮ್ ಸಮುದಾಯವು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಅವರು ದೂರಿದರು.

ಮಸೀದಿಗಳಿಗೆ ಭದ್ರತೆ ನೀಡಿ:

ಜಿಲ್ಲೆಯ ಎಲ್ಲ ಮಸೀದಿ ಮದ್ರಸಗಳಿಗೆ ಸೂಕ್ತ ಭದ್ರತೆ ನೀಡಿ, ಮುಂದೆ ಇಂತಹ ಘಟನೆ ಜಿಲ್ಲೆಯಲ್ಲಿ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಮು ಪ್ರಚೋದನೆ ನೀಡುವವರನ್ನು ನಿಯಂತ್ರಿಸಿ ಕೋಮು ಸೌಹಾರ್ದತೆಯನ್ನು ರಕ್ಷಿಸಬೇಕು. ಜಿಲ್ಲೆಯ ಎಲ್ಲ ಠಾಣಾ ವ್ಯಾಪ್ತಿಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಮುಸ್ಲಿಮ್ ಸಮುದಾಯ ಕುಂದು ಕೊರತೆ ಸಭೆಯನ್ನು ನಡೆಸಬೇಕು. ಎಲ್ಲೂರು ಪರಿಸರದಲ್ಲಿ ಮುಸ್ಲಿಮರಿಗೆ ಬೆದರಿಕೆಯೊಡ್ಡುತ್ತಿರುವ ಗ್ರಾಪಂ ಉಪಾ ಧ್ಯಕ್ಷ ಜಯಂತ್ ಭಟ್ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಮಾತುಕತೆ ನಡೆಸಿ ಕ್ರಮಕ್ಕೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುದರಂಗಡಿ ಮಸೀದಿ ಅಧ್ಯಕ್ಷ ಶೇಕ್ ಮನ್ನ ಸಾಹೇಬ್, ಪಡುಬಿದ್ರೆ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್, ಎಸ್‌ಡಿಪಿಐ ಮುಖಂಡ ಹನೀಫ್ ಮೂಳೂರು, ವಕ್ಫ್ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಯಾಹ್ಯಾ ನಕ್ವಾ, ಮನ್‌ಹರ್ ಇಬ್ರಾಹಿಂ, ಸೈಯ್ಯದ್ ಅಲಿ, ಸಿರಾಜ್ ಉಚ್ಚಿಲ, ಸೈಯ್ಯದ್ ಅಲಿ, ಹಮ್ಮಬ್ಬ ಮೊದಿನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಸುಧಾಕರ್ ಶೆಟ್ಟಿ, ದಕ್ಷತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News