ಮಣಿಪಾಲ: ಮಾ.3ರಿಂದ 'ನಮ್ಮ ಅಂಗಡಿ'
ಉಡುಪಿ, ಮಾ.1: ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್ (ಎಸ್‌ಒಸಿ), ಕನ್ಯಾನದ ನಮ್ಮ ಭೂಮಿ ಹಾಗೂ ಸಿಡಬ್ಲುಸಿಗಳ ಸಹಯೋಗ ದೊಂದಿಗೆ ಆಯೋಜಿಸುವ ವಾರ್ಷಿಕ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ 'ನಮ್ಮ ಅಂಗಡಿ' ಈ ಬಾರಿ ಮಾ.3ರಿಂದ 5ರವರೆಗೆ ಎಸ್‌ಒಸಿಯಲ್ಲಿ ನಡೆಯಲಿದೆ.
ಎಸ್‌ಓಸಿಯ ನಿರ್ದೇಶಕಿ ಡಾ.ನಂದಿನಿ ಲಕ್ಷ್ಮೀಕಾಂತ್ ಅವರು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಎಸ್‌ಓಸಿಯ ಸ್ನಾತಕೋತ್ತರ ಪದವಿ ಇವೆಂಟ್ ಮ್ಯಾನೇಜ್‌ಮೆಂಟ್ ಎಂಡ್ ಫ್ಲಾನಿಂಗ್ ವಿಭಾಗದ ವಿದ್ಯಾರ್ಥಿಗಳು ಕಲಿಕೆಯ ಒಂದು ಭಾಗವಾಗಿ ಈ ಮೇಳವನ್ನು ಸಂಘಟಿಸು ತಿದ್ದಾರೆ ಎಂದವರು ತಿಳಿಸಿದರು.
ನಮ್ಮ ಭೂಮಿಯ ಕರಕುಶಲಕರ್ಮಿಗಳು ತಾವೇ ತಯಾರಿಸಿದ ವಿವಿಧ ವಸ್ತುಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಿದ್ದಾರೆ. ಸಂಸ್ಥೆ ಕಳೆದ 13 ವರ್ಷಗಳಿಂದ ಸತತವಾಗಿ ಈ ಮೇಳವನ್ನು ಆಯೋಜಿಸುತ್ತಿದೆ.
ನಮ್ಮ ಅಂಗಡಿಯಲ್ಲಿ ಈ ಬಾರಿ ವಿವಿಧ ರೀತಿಯ ಸಾವಯವ ಆಹಾರ ಉತ್ಪನ್ನಗಳು, ವೈವಿಧ್ಯಮಯ ಕೈಮಗ್ಗದ ಉಡುಗೆತೊಡುಗೆಗಳು, ಶೃಂಗಾರ ಸಾಮಗ್ರಿಗಳು ಒಂದೇ ಸೂರಿನಡಿ ಸಿಗಲಿದೆ. ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಈ ಮೇಳವನ್ನು ವೀಕ್ಷಿಸಲು ದೂರ ಬೆಂಗಳೂರು, ಮಂಗಳೂರು, ಕಾರ್ಕಳಗಳಿಂದಲೂ ಜನರು ಬರುತಿದ್ದಾರೆ ಎಂದು ಡಾ.ನಂದಿನಿ ನುಡಿದರು.
ಗ್ರಾಮೀಣ ಪ್ರದೇಶಗಳಲ್ಲೇ ತಯಾರಿಸಲಾಗುವ ಕರಕುಶಲ ವಸ್ತುಗಳು ಹಾಗೂ ಸಾವಯವ ಉತ್ಪನ್ನಗಳಿಗೆ ಇಲ್ಲಿ ಒತ್ತು ನೀಡಲಾಗುತ್ತಿದೆ. ತಯಾರಕರಿಂದ ನೇರವಾಗಿ ಗ್ರಾಹಕರ ಕೈಸೇರಲು ಈ ಮೇಳ ಸಹಕಾರಿಯಾಗಿದೆ. ಈ ಪ್ರದರ್ಶನದಿಂದ ಸಂಗ್ರಹವಾಗುವ ಹಣವನ್ನು ಕರಕುಶಲ ಕಲೆಯಲ್ಲಿ ತರಬೇತಿ ಪಡೆಯುತ್ತಿರುವ ನಮ್ಮ ಭೂಮಿಯ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದ್ಮಕುಮಾರ್ ಕೆ., ಸೌಪರ್ಣಿಕ ಅತ್ತಾವರ ಹಾಗೂ ರಿಚಾ ಶ್ರೀವಾಸ್ತವ ಉಪಸ್ಥಿತರಿದ್ದರು.