ಮಂಗಳೂರು: ಟ್ಯಾಕ್ಸಿ ಚಾಲಕನ ಕೊಲೆ ಪ್ರಕರಣ: ಆರೋಪಿಗಳು ಖುಲಾಸೆ
ಮಂಗಳೂರು, ಮಾ. 1: ಬಿಜೈ ಟ್ಯಾಕ್ಸಿ ಕಾರು ಚಾಲಕ ಗೋವರ್ಧನ ಎಂಬವರ ಕೊಲೆ ಪ್ರಕರಣದ ಆರೋಪಿಗಳನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಸೋಮಶೇಖರ ಹಾಗೂ ಮಹಾಂತೇಶ ಖುಲಾಸೆಗೊಂಡವರು. ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ನ್ಯಾಯಾಧೀಶ ನೇರಳೆ ವೀರಭದ್ರಯ್ಯ ಭವಾನಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
2011ರ ಆಗಸ್ಟ್ 25ರಂದು ರಾತ್ರಿ ಸುಮಾರು 7 ಗಂಟೆಗೆ ಹೊತ್ತಿಗೆ ಬಿಜೈನ ಕಾರ್ ಪಾರ್ಕಿಂಗ್ ಸ್ಥಳದಲ್ಲಿದ್ದ ಇಂಡಿಕಾ ಕಾರು ಚಾಲಕ ಗೋವರ್ಧನನನ್ನು ಸುಲಿಗೆ ಮಾಡುವ ಉದ್ದೇಶದಿಂದ ಆರೋಪಿ ಸೋಮಶೇಖರ ಕಾರ್ಕಳಕ್ಕೆ ಕಾರನ್ನು ಬಾಡಿಗೆಗೆ ಗೊತ್ತು ಮಾಡಿ ಮಂಗಳೂರಿನಿಂದ ಕಾರ್ಕಳ ಕಡೆಗೆ ತೆರಳಿದ್ದ. ದಾರಿ ಮಧ್ಯೆ ಎರಡನೇ ಆರೋಪಿ ಮಹಾಂತೇಶ ಪಡುಬಿದ್ರೆಯಲ್ಲಿ ಕಾರಿನಲ್ಲಿ ಸೇರಿಕೊಂಡಿದ್ದಾನೆ.
ಕಾರು ನಿಟ್ಟೆ ಕಾಲೇಜು ತನಕ ಪ್ರಯಾಣಿಸಿದಾಗ ಆರೋಪಿಗಳು ಬಳಿಕ ಕಾರನ್ನು ವಾಪಸ್ ತಿರುಗಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ. ಕಾರ್ಕಳದ ನಿಟ್ಟೆಯಿಂದ ಬರುವಾಗ ನಂದಳಿಕೆ ಎಂಬಲ್ಲಿ ಕಾರು ಚಾಲಕನನ್ನು ಸುಲಿಗೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ಗೋವರ್ಧನ ಪ್ರತಿಭಟಿಸುತ್ತಿದ್ದಾಗ ಕಾರಿನ ಹಿಂದಿನ ಸೀಟಿನಲ್ಲಿದ್ದ ಕುಳಿತಿದ್ದ ಮಹಾಂತೇಶ ಬಲವಾಗಿ ಕೈಯಿಂದ ಚಾಲಕ ಗೋವರ್ಧನನ ಗುಪ್ತಾಂಗಕ್ಕೆ ಗುದ್ದಿದ್ದಾನೆ. ಈ ಏಟಿನಿಂದ ಗೋವರ್ಧನ ಮೃತಪಟ್ಟಿದ್ದ.
ಬಳಿಕ ಚಾಲಕನ ಬಳಿ ಇದ್ದ ಪರ್ಸ್ ಹಾಗೂ ಚಿನ್ನಾಭರಣ ಸುಲಿಗೆ ಮಾಡಲು ಯತ್ನಿಸಿದ್ದರು. ಚಿನ್ನಾಭರಣ ಸಿಗದೇ ಇದ್ದಾಗ ಪರ್ಸ್‌ನಲ್ಲಿದ್ದ ಎಟಿಎಂ ಕಾರ್ಡ್, 50 ರೂ. ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಶವವನ್ನು ಬೆಳ್ಮಣ್ ಕಿನ್ನಿಗೋಳಿ ರಸ್ತೆಯ ಇಂದಾರ ಎಂಬಲ್ಲಿ ರಸ್ತೆ ಬದಿ ಎಸೆದು ಬಳಿಕ ಗೋವರ್ಧನ್‌ರ ಕಾರಿನಲ್ಲಿ ಹಿಂತಿರುಗಿ ಬಂದು ಕಾರನ್ನು ರಾಷ್ಟ್ರೀಯ ಹೆದ್ದಾರಿಯ ಸುಜ್ಲಾನ್‌ಗೆ ಹೋಗುವ ಕ್ರಾಸ್ ಒಳಗೆ ನಿಲ್ಲಿಸಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಉರ್ವ ಪೊಲೀಸರು ಆರೋಪಿಗಳ ಪತ್ತೆಗೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಸುಮಾರು 2 ತಿಂಗಳ ಬಳಿಕ ಆರೋಪಿಗಳು ಪತ್ತೆಯಾಗಿದ್ದರು. ಕೊನೆಗೆ ಮೃತ ಚಾಲಕ ಗೋವರ್ಧನನ ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿ 40 ಮಂದಿ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದರು.