ಬಿಜೆಪಿಯಿಂದ ಮುಸ್ಲಿಂ ಸಮುದಾಯದ ಕಡೆಗಣನೆ ; ಮುಖಂಡರ ಆತ್ಮಾವಲೋಕನ

Update: 2017-03-01 16:17 GMT

ಲಕ್ನೊ, ಮಾ.2: ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗವು ಮುಸ್ಲಿಂ ಮತದಾರರ ಜೊತೆ ನಿಕಟ ಸಂಪರ್ಕ ಸಾಧಿಸಲು ಹಗಲಿರುಳು ಶ್ರಮಿಸಿತ್ತು. ಆದರೆ ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯ ವಿಷಯ ಬಂದಾಗ ಅಲ್ಲಿ ಕಥೆಯೇ ಬದಲಾಯಿತು. ವಿಧಾನಸಭೆಯ 403 ಸ್ಥಾನಗಳಿಗೆ ಟಿಕೆಟ್ ಹಂಚುವಾಗ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸಿರುವುದು ಸದಸ್ಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಧಾನಸಭೆಯ ಚುನಾವಣೆಯ ಮೇಲೆ ಕಣ್ಣಿಟ್ಟ ಬಿಜೆಪಿಯ ಅಲ್ಪಸಂಖ್ಯಾತ ಘಟಕವು ಸದಸ್ಯತ್ವ ಅಭಿಯಾನದ ಮೂಲಕ ಮುಸ್ಲಿಮ್ ಮತದಾರರನ್ನು ಪಕ್ಷದ ಸದಸ್ಯರನ್ನಾಗಿ ನೋಂದಾಯಿಸಿತ್ತು. ಆದರೆ ಈ ಎಲ್ಲಾ ಪ್ರಯತ್ನಗಳ ಬಳಿಕವೂ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡದಿರು ಬಗ್ಗೆ ಈಗ ಪಕ್ಷದ ಮುಖಂಡರು ಆತ್ಮಾವಲೋಕನಕ್ಕೆ ಮುಂದಾಗಿದ್ದಾರೆ.

ಮುಸ್ಲಿಮರಿಗೆ ಟಿಕೇಟು ನೀಡುವ ಅಗತ್ಯವಿಲ್ಲ ಎಂಬುದು ಬಿಜೆಪಿ ಸಂಸದ ವಿನಯ್‌ಕುಮಾರ್ ಕಟಿಯಾರ್ ಅವರ ಅಭಿಪ್ರಾಯವಾಗಿದೆ. ಆದರೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಉಮಾ ಭಾರತಿ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಬೇಕಿತ್ತು ಎಂಬ ಅಭಿಪ್ರಾಯ ಹೊಂದಿದ್ದಾರೆ.

ಮುಸ್ಲಿಮರಿಗೆ ಟಿಕೆಟ್ ನೀಡದೆ ಪಕ್ಷವು ಬಹುದೊಡ್ಡ ಪ್ರಮಾದ ಎಸಗಿದೆ. ನಾವು ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬ ಬಗ್ಗೆ ನನಗೆ ಬೇಸರವಿದೆ. ಓರ್ವ ಮುಸ್ಲಿಮ್ ಸಮುದಾಯದ ವ್ಯಕ್ತಿಯನ್ನು ಉತ್ತರಪ್ರದೇಶ ವಿಧಾನಸಭೆಯಲ್ಲಿ ಪಕ್ಷದ ಪ್ರತಿನಿಧಿಯಾಗಿ ತರುವ ಬಗ್ಗೆ ನಾನು ಈಗಾಗಲೇ ಅಮಿತ್ ಶಾ ಮತ್ತು ಬಿಜೆಪಿ ಉ.ಪ್ರದೇಶ ಘಟಕಾಧ್ಯಕ್ಷ ಕೇಶವ್‌ಪ್ರಸಾದ್ ವೌರ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಉಮಾಭಾರತಿ ತಿಳಿಸಿದ್ದಾರೆ.

ಮುಸ್ಲಿಮರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕಿತ್ತು ಎಂದು ರಾಜನಾಥ್ ಸಿಂಗ್ ಕೂಡಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಟಿಕೆಟ್ ಹಂಚಿಕೆಯ ವಿಷಯಕ್ಕೆ ಬಂದರೆ, ಮುಸ್ಲಿಮರಿಗೆ ಟಿಕೆಟ್ ನೀಡಿದ್ದರೆ ಒಳ್ಳೆಯದಿತ್ತು. ನಾವು ಮುಂದಿನ ದಿನದಲ್ಲಿ ರಾಜ್ಯದಲ್ಲಿ ಸರಕಾರ ರಚಿಸಿದಾಗ ಅವರ (ಮುಸ್ಲಿಮರ) ಸಮಸ್ಯೆಯನ್ನು ಆಲಿಸಿ ಪರಿಹರಿಸುತ್ತೇವೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News