ನನ್ನನ್ನು ಸಂಕಷ್ಟಗಳಿಂದ ಪಾರು ಮಾಡಿರುವುದೇ ಕೃಷ್ಣ: ಜನಾರ್ದನ ರೆಡ್ಡಿ
ಉಡುಪಿ, ಮಾ.1: ನನ್ನನ್ನು ಸಂಕಷ್ಟಗಳಿಂದ ಪಾರು ಮಾಡಿರುವುದೇ ಕೃಷ್ಣ. ಕೃಷ್ಣನೇ ನನಗೆ ಶಕ್ತಿ ಹಾಗೂ ಸ್ಪೂರ್ತಿ ಎಂದು ಕರ್ನಾಟಕದ ಮಾಜಿ ಸಚಿವ, ಗಣಿದಣಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆಗಾಗಿ ಜೈಲು ಸೇರಿ, ಈಗ ಜಾಮೀನಿನ ಮೇಲೆ ಬಿಡುಗಡೆ ಗೊಂಡಿರುವ ಜನಾರ್ದನ ರೆಡ್ಡಿ ಅವರು ಶ್ರೀಕೃಷ್ಣನ ದರ್ಶನಕ್ಕಾಗಿ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಧಿಕಾರವಿದ್ದಾಗ ಭಗವಂತನ ಸೇವೆ ಮಾಡಿದ್ದೆ ಎಂದವರು ಹೇಳಿದರು.
ಖಾಸಗಿ ಭೇಟಿಯ ಮೇಲೆ ಏಕಾಂಗಿಯಾಗಿ ಉಡುಪಿಗೆ ಆಗಮಿಸಿದ್ದ ಅವರು ಶ್ರೀಕೃಷ್ಣ, ಮುಖ್ಯಪ್ರಾಣರ ದರ್ಶನ ಪಡೆದು ಬಳಿಕ ಪರ್ಯಾಯ ಪೇಜಾವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ, ಅನುಗ್ರಹ ಮಂತ್ರಾಕ್ಷತೆ ಪಡೆದು, ಶ್ರೀಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.
ಮಠದಲ್ಲಿ ಉಪಸ್ಥಿತರಿದ್ದ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ ಅವರು, ತಾನು ದೇವರ ದರ್ಶನಕ್ಕೆ ಬಂದಿರುವುದರಿಂದ ರಾಜಕೀಯ ಮಾತನಾಡುವುದಿಲ್ಲ ಎಂದುತ್ತರಿಸಿದರು.
ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಡೈರಿ ವಿವಾದದ ಕುರಿತು ಹಾಗೂ ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಸಂಘರ್ಷದ ಕುರಿತು ಮಾತನಾಡಲು ಸ್ಪಷ್ಟವಾಗಿ ನಿರಾಕರಿಸಿದರು.
ಸಮಯ ಬಂದಾಗ ಎಲ್ಲಾ ವಿಚಾರವನ್ನು ಮಾತನಾಡುತ್ತೇನೆ ಎಂದು ಹೇಳಿ ನಿರ್ಗಮಿಸಿದರು. ಮೇ ತಿಂಗಳಲ್ಲಿ ಮತ್ತೊಮ್ಮೆ ಉಡುಪಿಗೆ ಬರುವ ಸೂಚನೆಯನ್ನೂ ಅವರು ನೀಡಿದರು.