ಶಶಿಕಲಾಗೆ ಜೈಲಲ್ಲಿ ಐಷಾರಾಮಿ ಸೌಲಭ್ಯವಿಲ್ಲ : ಡಿಐಜಿ
ಚೆನ್ನೈ, ಮಾ.1: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಜೈಲಿನಲ್ಲಿ ಐಷಾರಾಮಿ ಸವಲತ್ತು ಒದಗಿಸಲಾಗಿದೆ ಎಂಬ ವರದಿಯನ್ನು ಜೈಲು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ಈ ಕುರಿತು ವಿವರ ಕೋರಿ ವಕೀಲರೋರ್ವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಉತ್ತರಿಸಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದ ಡಿಐಜಿ(ಬಂಧೀಖಾನೆ ವಿಭಾಗ), ಟಿವಿ ಬಿಟ್ಟು ಇತರ ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ಆಕೆಗೆ ಒದಗಿಸಲಾಗಿಲ್ಲ. ಈಕೆಯ ಜೈಲುಕೋಣೆಗೆ ಪ್ರತ್ಯೇಕ ಬಾಥ್‌ರೂಂ ವ್ಯವಸ್ಥೆ, ಎಸಿ ಸೌಲಭ್ಯ, ಮಂಚ ಮತ್ತು ಹಾಸಿಗೆ.. ಇತ್ಯಾದಿ ಪ್ರತ್ಯೇಕ ಸೌಲಭ್ಯ ಒದಗಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಂ.ಪಿ. ರಾಜವೇಲಾಯುಧಂ ಎಂಬ ವಕೀಲರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಡಿಐಜಿ, ಶಶಿಕಲಾ ಅವರನ್ನು ಸೋದರಳಿಯ, ಎಐಎಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಫೆ.20ರಂದು ಭೇಟಿಯಾಗಿ 35ರಿಂದ 40 ನಿಮಿಷ ಮಾತುಕತೆ ನಡೆಸಿದ್ದಾರೆ .
ಇದು ಶಶಿಕಲಾ ಜೈಲು ಸೇರಿದ ಬಳಿಕ ಇವರೀರ್ವರ ನಡುವಿನ ಪ್ರಥಮ ಭೇಟಿಯಾಗಿದೆ ಎಂದು ತಿಳಿಸಿದ್ದಾರೆ. ಶಶಿಕಲಾ ಮತ್ತು ಅವರ ಸಂಬಂಧಿ ಇಳವರಸಿ ಅವರನ್ನು ತಮಿಳುನಾಡಿನ ಜೈಲಿಗೆ ಸ್ಥಳಾಂತರಿಸಲು ಕೋರಿ ಇದುವರೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ ಎಂದೂ ಡಿಐಜಿ ತಿಳಿಸಿದ್ದಾರೆ.