ಮಂಗಳೂರು: ಏರ್‌ಪೋರ್ಟ್‌ನಲ್ಲಿ 1.16 ಕೋ. ರೂ. ಮೌಲ್ಯದ ವಸ್ತುಗಳು ವಶಕ್ಕೆ
ಮಂಗಳೂರು, ಮಾ. 1: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖಾಧಿಕಾರಿಗಳು ಫೆಬ್ರವರಿ ತಿಂಗಳಾಂತ್ಯಕ್ಕೆ ಒಟ್ಟು 24 ಅಕ್ರಮ ಸಾಗಾಟ ಪ್ರಕರಣಗಳನ್ನು ಪತ್ತೆಹಚ್ಚಿ 1.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪೈಕಿ 92.94 ಲಕ್ಷರೂ. ,ಮೌಲ್ಯದ 3.18 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. 3 ಪ್ರಕರಣಗಳಲ್ಲಿ ಪಾದರಸ ಲೇಪಿತ ರೂಪದಲ್ಲಿ, 2 ಪ್ರಕರಣಗಳಲ್ಲಿ ಬೆಳ್ಳಿ ರೂಪದಲ್ಲಿ ಮತ್ತು 2 ಪ್ರಕರಣಗಳಲ್ಲಿ ವಿವಿಧ ರೀತಿಯ ಒಡವೆಗಳ ರೂಪಗಳಲ್ಲಿ ಚಿನ್ನವನ್ನು ಸಾಗಿಸಲೆತ್ನಿಸುತ್ತಿದ್ದಾಗ ಪತ್ತೆಹಚ್ಚಲಾಗಿದೆ.
ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ಮೂರು ಬಾರಿ ವಿದೇಶಿ ಕರೆನ್ಸಿಗಳ ಸಾಗಾಟ ಪ್ರಕರಣವನ್ನು ಕಂದಾಯ ಗುಪ್ತಚರ ಅಧಿಕಾರಿಗಳು ಪತ್ತೆಹಚ್ಚಿದ್ದು, ಭಾರತೀಯ ವೌಲ್ಯ 18.79 ಲಕ್ಷರೂ. ವೌಲ್ಯದ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ 2.03 ಲಕ್ಷ ರೂ. ಮೌಲ್ಯದ 4.625 ಗ್ರಾಮ್ ತೂಕವುಳ್ಳ ತಂಬಾಕನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಬೆಲೆಬಾಳುವ ವಿದೇಶಿ ಸಿಗರೇಟು ಸಾಗಿಸಲೆತ್ನಿಸಿದ್ದ 13 ಪ್ರಕರಣಗಳಲ್ಲಿ 2.44 ಲಕ್ಷ ಮೌಲ್ಯದ 120 ಸಿಗರೇಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ಇಲಾಖೆ ಆಯುಕ್ತ ಡಾ. ಎಂ.ಸುಬ್ರಹ್ಮಣ್ಯಯನ್ ತಿಳಿಸಿದ್ದಾರೆ.