ಮಣಿಪಾಲ: ಗೃಹ ಉತ್ಪನ್ನ, ಕರಕುಶಲತೆ ತರಬೇತಿ
ಮಣಿಪಾಲ, ಮಾ.1: ಹಿಂದೆ ಮಹಿಳೆಯರು ಹೆಚ್ಚಾಗಿ ಗೃಹ ನಿರ್ವಹಣೆ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರೊಂದಿಗೆ ಸರಿಸಮಾನರಾಗಿ ಉದ್ಯೋಗ ಹಾಗೂ ಎಲ್ಲಾ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಆದಾಯ ಗಳಿಕೆಗೆ ಗಮನ ಹರಿಸುತ್ತಿದ್ದಾರೆ ಎಂದು ಮಣಿಪಾಲದ ಪವರ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಹಾಗೂ ಯಶಸ್ವೀ ಉದ್ಯಮಿಯಾಗಿರುವ ರೇಣು ಜಯರಾಮ್ ಹೇಳಿದ್ದಾರೆ.
ಮಣಿಪಾಲ ಶಿವಳ್ಳಿಯ ಬಿವಿಟಿಯಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ ಗೃಹ ಉತ್ಪನ್ನ ಹಾಗೂ ಕರಕುಶಲತೆ ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಸಿದ್ಧ ಆಹಾರ, ಸಾರು, ಸಾಂಬಾರು ಹುಡಿ, ಉಪ್ಪಿನಕಾಯಿ, ಹಪ್ಪಳ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಬೇಡಿಕೆಗನುಸಾರವಾಗಿ ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಸೇವೆ ನೀಡಿದಲ್ಲಿ ಯಶಸ್ಸು ಖಂಡಿತ ಎಂದವರು ನುಡಿದರು.
ಭಾರತೀಯ ವಿಕಾಸ ಟ್ರಸ್ಟ್‌ನ ವಿಶ್ವಸ್ಥ ಕೆ.ಎಂ.ಉಡುಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಶಸ್ವಿ ಉದ್ಯಮಿ ಎನಿಸಿಕೊಳ್ಳಲು ಹೆಚ್ಚಿನ ವಿದ್ಯಾಭ್ಯಾಸದ ಅಗತ್ಯ ವಿಲ್ಲ. ಇಲ್ಲಿನ ಪರಿಸರ ಮತ್ತು ಬೇಡಿಕೆಯನ್ನು ಗಮನದಲ್ಲಿಟ್ಟು ಪ್ರಾಮಾಣಿಕ ದುಡಿಮೆ ಕೈಗೊಂಡರೆ ಲಾಭದಾಯಕ ಉದ್ಯಮ ಸ್ಥಾಪಿಸಲು ಸಾಧ್ಯ ಎಂದರು.
ಈ ತರಬೇತಿಯಲ್ಲಿ ಮಹಿಳೆಯರಿಗೆ ಗೃಹ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಬಗ್ಗೆ ವಿಸ್ತ್ರತ ಮಾಹಿತಿ ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಶಿಬಿರಾರ್ಥಿಗಳಿಗೆ ಕರೆಯಿತ್ತರು.
ವೇದಿಕೆಯಲ್ಲಿ ಟಿ.ಎ.ಪೈ ಗ್ರಾಮೀಣ ತರಬೇತಿ ಕೇಂದ್ರದ ನಿರ್ದೇಶಕ ಕೃಷ್ಣಾನಂದ ನಾಯಕ್, ಸಿಇಒ ಮನೋಹರ ಕಟ್ಗೇರಿ ಆಡಳಿತಾಧಿಕಾರಿ ಐ.ಜಿ. ಕಿಣಿ ಉಪಸ್ಥಿತರಿದ್ದರು. ಬಿವಿಟಿ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಅತಿಥಿಗಳನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಐದು ದಿನಗಳ ತರಬೇತಿಯಲ್ಲಿ ಉಡುಪಿ ಜಿಲ್ಲೆಯ 30ಕ್ಕೂ ಅಧಿಕ ಮಹಿಳೆ ಯರು ಭಾಗವಹಿಸುತ್ತಿದ್ದಾರೆ. ಶಿಬಿರದಲ್ಲಿ ವಿವಿಧ ರೀತಿಯ ಸಾಂಬಾರು ಹುಡಿ, ಹಪ್ಪಳ, ಸಂಡಿಗೆ ತಯಾರಿ, ಫಿನಾಯಿಲ್ ತಯಾರಿ, ಕರಕುಶಲತೆ, ಪೇಪರ್ ಬ್ಯಾಗ್ ತಯಾರಿ ಇತ್ಯಾದಿಗಳ ಬಗ್ಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾತ್ಯಕ್ಷತೆ, ಮಾಹಿತಿ ನೀಡಲಾಗುತ್ತಿದೆ.