ಮಾ.4-5: ಸಾನಿಧ್ಯ ವಿಶೇಷ ಮಕ್ಕಳ ‘ವಿಷನ್-2017’

Update: 2017-03-01 18:44 GMT

ಮಂಗಳೂರು, ಮಾ.1: ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆ ‘ಸಾನಿಧ್ಯ’ದ ವತಿಯಿಂದ ಶಾಲೆಯ ವಿಶೇಷ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ‘ವಿಷನ್ 2017’ ಕಾರ್ಯಕ್ರಮವು ಮಾ.4 ಮತ್ತು 5ರಂದು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಾನಿಧ್ಯದ ಆಡಳಿತಾಕಾರಿ ವಸಂತ ಕುಮಾರ್ ಶೆಟ್ಟಿ, ಮಾ.4ರಂದು ಸಂಜೆ 5:30ಕ್ಕೆ ಕದ್ರಿ ಉದ್ಯಾನವನದಲ್ಲಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಪ್ರದರ್ಶನದ ಜತೆ ಮಾ.5ರಂದು ಸಾನಿಧ್ಯ ಉತ್ಸವವು ನಡೆಯಲಿದ್ದು, ವಿಶೇಷ ಮಕ್ಕಳು ಮಹಿಷಿ ಮೋಕ್ಷ ಎಂಬ ಯಕ್ಷಗಾನ, ಅಮರ್ ಜವಾನ್ ಎಂಬ ಪ್ರಹಸನ ಹಾಗೂ ವಿಶೇಷ ನೃತ್ಯ ಕಾರ್ಯಕ್ರಮವನ್ನು ಪ್ರದರ್ಶಿಸಲಿದ್ದಾರೆ. ಅಂದು ಸಂಜೆ 5:30ಕ್ಕೆ ಈ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡುವರು ಎಂದು ಹೇಳಿದರು.

ಸರಕಾರದ ಅನುದಾನಕ್ಕಾಗಿ ಸಂಕಷ್ಟ!

ಸರಕಾರದಿಂದ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ನಡೆಸಲಾಗುವ ಶಾಲೆ, ವಸತಿಶಾಲೆಗಳಿಗೆ ಅನುದಾನ ಒದಗಿಸಲು ಸರಕಾರವು ಬಯೋಮೆಟ್ರಿಕ್ ಅಳವಡಿಸುವ ಮಾನದಂಡವನ್ನು ನೀಡಿದೆ. ಆದರೆ ಇದರಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ತೊಂದರೆಯಾಗಲಿದ್ದು, ಈ ಬಗ್ಗೆ ಸರಕಾರ ಗಮನ ಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು. ಅಲ್ಲದೆ, ಪ್ರಸ್ತುತ 25 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಆಶ್ರಯ ಒದಗಿಸುತ್ತಿರುವ ಸಂಸ್ಥೆಗಳಿಗೆ ಇಲಾಖೆಯಿಂದ ಬೆಂಬಲ ಸಿಗುತ್ತಿಲ್ಲ. ಮಾನಸಿಕ ವಿಕಲಚೇತನರಿಗೆ ವಯಸ್ಸಿನ ನಿಯಂತ್ರಣ ಸರಿಯಲ್ಲ. 50 ವಷರ್ದವರ ವರ್ತನೆ 5 ವರ್ಷದವರಂತೆಯೇ ಇರುತ್ತದೆ. ಅವರಿಗೆ ಬೆಂಬಲ, ಪ್ರೋತ್ಸಾಹದ ಅಗತ್ಯವಿದೆ ಎಂದವರು ಹೇಳಿದರು.

ಸಾನಿಧ್ಯ ಶಾಶ್ವತ ಕಟ್ಟಡ ಪ್ರಗತಿಯಲ್ಲಿ: ವಿಶೇಷ ಮಕ್ಕಳನ್ನು ಜೀವನ ಪರ್ಯಂತ ನೋಡಿಕೊಳ್ಳುವ ನಿಟ್ಟಿನಲ್ಲಿ ಸಾನಿಧ್ಯ ಶಾಶ್ವತ ವಾಸದ ಮನೆಯ ಕಟ್ಟಡ ಕಾಮಗಾರಿಯು 1.65 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಜೊತೆಯಲ್ಲೇ ಮುಂದಿನ ದಿನಗಳಲ್ಲಿ ಸಾನಿಧ್ಯದ ವತಿಯಿಂದ ಆಡು ಸಾಕಣೆಯ ಮೂಲಕ ವಿಶೇಷ ಮಕ್ಕಳೂ ಸ್ವಾವಲಂಬಿಗಳಾಗಿ ಬದುಕು ರೂಪಿಸಲು ವಿಶೇಷ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಅಲ್ಲದೇ ಡಾಟಾ ಎಂಟ್ರಿ ಮೂಲಕ 20 ವಿಶೇಷ ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವಸಂತ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಕೋಶಾಕಾರಿ ಜಗದೀಶ್ ಶೆಟ್ಟಿ, ಟ್ರಸ್ಟಿ ಬಿ.ಎಸ್. ಮುಹಮ್ಮದ್ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News