×
Ad

ದೇಶಭಕ್ತಿಯ ಚರ್ಚೆಗೆ ಹೊಸ ತಿರುವು

Update: 2017-03-02 09:39 IST

ಹೊಸದಿಲ್ಲಿ, ಮಾ.2: ಅಫ್ಝಲ್ ಗುರುವಿನಂತಹ ಭಯೋತ್ಪಾದಕರನ್ನು ಹಾಗೂ ಮಾವೋವಾದಿಗಳನ್ನು ಬೆಂಬಲಿಸುವ ಮಂದಿಯನ್ನು ಸೇನೆಯ ಕರ್ತವ್ಯನಿರತ ಯೋಧರೊಬ್ಬರು ಟೀಕಿಸುವ ಕುರಿತ ವೀಡಿಯೊವನ್ನು ಟ್ವೀಟ್ ಮಾಡುವ ಮೂಲಕ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಬುಧವಾರ, ದೇಶಭಕ್ತಿ ಕುರಿತ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ.

ರಾಮ್‌ಜಾಸ್ ಕಾಲೇಜು ಹಿಂಸಾಚಾರದ ಬಳಿಕ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ದೇಶಭಕ್ತಿ ಕುರಿತ ಚರ್ಚೆ ದೇಶದಲ್ಲಿ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ರಿಜಿಜು, ಯೋಧನ ವೀಡಿಯೊ ಬಳಸಿಕೊಂಡು ಬಿಜೆಪಿ ವಿರೋಧಿಗಳ ಮೇಲಿನ ದಾಳಿ ಮುಂದುವರಿಸಿದ್ದಾರೆ. ಭಾರತ ವಿರೋಧಿ ಘೋಷಣೆ ಹಾಗೂ ಪ್ರತಿಭಟನೆಯನ್ನು ಖಂಡಿಸಿದ್ದಾರೆ.

ಮರಾಠಾ ಲೈಟ್ ಇನ್‌ಫೆಂಟ್ರಿಯ 9ನೆ ಬೆಟಾಲಿಯನ್ ಯೋಧ ಶ್ರೀರಾಮ್ ಗೋರ್ಡೆ ಅವರು ದೊಡ್ಡ ಸಂಖ್ಯೆಯ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೊವನ್ನು ಸಚಿವರು ಬಳಸಿದ್ದಾರೆ. "ಭಾರತದಲ್ಲಿ ವಾಸಿಸುತ್ತಾ ಭಾರತಕ್ಕೆ ಧಿಕ್ಕಾರ ಕೂಗುವವರು ಉಗ್ರಗಾಮಿಗಳಿಗಿಂತ ಹೆಚ್ಚು ಅಪಾಯಕಾರಿ" ಎಂದು ಹೇಳಿದ್ದಾರೆ. ಜಾಮ್‌ನಗರದಿಂದ ಈ ವೀಡಿಯೊ ಪೋಸ್ಟ್ ಆಗಿದೆ.

ಈ ವೀಡಿಯೊ ಜತೆ ರಿಜಿಜು, "ನೋವು ಸಮುದ್ರಕ್ಕಿಂತಲೂ ಆಳ. ನಮ್ಮ ಸೈನಿಕರು ಭಾರವಾದ ಹೃದಯದೊಂದಿಗೆ ಮಾತನಾಡುವಂಥ ಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ" ಎಂದು ಹೇಳುವ ಮೂಲಕ ಗುರ್‌ ಮೆಹರ್ ಅವರನ್ನು ಬೆಂಬಲಿಸಿದ ಎಡಪಕ್ಷ, ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಗುಂಪುಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News