×
Ad

113 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಿಸಲು ಇಶಾ ಪ್ರತಿಷ್ಠಾನ ಅನುಮತಿ ಪಡೆದಿಲ್ಲ : ತಮಿಳುನಾಡು ಸರಕಾರ

Update: 2017-03-02 13:22 IST

ಚೆನ್ನೈ,ಮಾ.2 : ಕೊಯಂಬತ್ತೂರಿನಲ್ಲಿ ತಲೆಯೆತ್ತಿರುವ 113 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಿಸಲು ಇಶಾ ಪ್ರತಿಷ್ಠಾನ ಅನುಮತಿ ಪಡೆದಿಲ್ಲ ಎಂದು ಇಶಾ ಯೋಗಾ  ಸೆಂಟರ್ ವಿರುದ್ಧ ಮದ್ರಾಸ್ ಹೈಕೋರ್ಟಿನಲ್ಲಿ ದಾಖಲಾಗಿರುವ ಅಪೀಲೊಂದರ ಸಂಬಂಧ ತಮಿಳುನಾಡು ಸರಕಾರ ಹೈಕೋರ್ಟಿಗೆ ಮಾಹಿತಿ ನೀಡಿದೆ. ವಿವಿಧ ಸಂಘಟನೆಗಳ ಪ್ರತಿಭಟನೆಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಈ ಬೃಹತ್ ಮೂರ್ತಿಯನ್ನು ಫೆಬ್ರವರಿ 24ರಂದು ಅನಾವರಣಗೊಳಿಸಿದ್ದರು.

ಈ ಶಿವನ ಮೂರ್ತಿ ನಿರ್ಮಾಣವನ್ನು ಅಗತ್ಯ ಅನುಮತಿಗಳನ್ನು ಪಡೆಯದೆಯೇ ಮಾಡಲಾಗಿದೆ ಎಂದು ಫೆಬ್ರವರಿ 17ರಂದು ವೆಲ್ಲಿಂಗಿರಿ ಹಿಲ್ ಟ್ರೈಬಲ್ ಪ್ರೊಟೆಕ್ಷನ್ ಸೊಸೈಟಿ ಹೈಕೋರ್ಟಿನಲ್ಲಿ ದಾಖಲಿಸಿದ ಅರ್ಜಿಯಲ್ಲಿ ಹೇಳಲಾಗಿತ್ತಲ್ಲದೆ ಇಕ್ಕರೈ ಪೊಲುವಂಪಟ್ಟಿ ಗ್ರಾಮದಲ್ಲಿ ತಲೆಯೆತ್ತಿರುವ ಈ ಮೂರ್ತಿಯನ್ನು ಕೆಡವಬೇಕೆಂದೂ ಆಗ್ರಹಿಸಲಾಗಿತ್ತು.

ತಮ್ಮ ಇಲಾಖೆ ಯೋಗ ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದ ಸಂಘಟನೆಗೆ ಈ ಮೂರ್ತಿ ನಿರ್ಮಿಸಲು ಅನುಮತಿ ನೀಡಿಲ್ಲ ಎಂದು ಕೊಯಂಬತ್ತೂರಿನ ನಗರ ಯೋಜನಾ ವಿಭಾಗದ ಪ್ರಭಾರ ಉಪ ನಿರ್ದೇಶಕ ಆರ್ ಸೆಲ್ವರಾಜ್ ಹೇಳಿದ್ದಾರೆ. ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರದಿಂದ ಅನುಮತಿ ಪಡೆಯುವಂತೆ ತಾನು ಇಶಾ ಪ್ರತಿಷ್ಠಾನಕ್ಕೆ ನಿರ್ದೇಶನ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ಪ್ರತಿಷ್ಠಾನಕ್ಕೆ ಡಿಸೆಂಬರ್ 2012ರಲ್ಲಿಯೇ ನೀಡಲಾಗಿದ್ದ ಬೀಗ ಮತ್ತು ಮುದ್ರೆ ನೊಟೀಸಿನ ಬಗ್ಗೆಯೂ ತಮ್ಮ ಅಫಿಡವಿಟ್ ನಲ್ಲಿ ಸೆಲ್ವರಾಜ್ ಉಲ್ಲೇಖಿಸಿದ್ದಾರೆ. ಇಶಾ ಮೆಡಿಟೇಶನ್ ಲಿಂಗಂ ರಿಲಿಜಿಯಸ್ ವರ್ಕ್ ಶಾಪ್ ಮತ್ತು ಇತರ ಕಟ್ಟಡಗಳಿರುವ 109 ಎಕ್ರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡಗಳ ಸಂಬಂಧ ಈ ನೊಟೀಸ್ ಜಾರಿಗೊಳಿಸಲಾಗಿತ್ತು.

ಇಶಾ ಪ್ರತಿಷ್ಠಾನ ತನ್ನ ಬ್ಲಾಗಿನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆಯಲ್ಲದೆ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳಲಾಗಿದೆ ಎಂದೂ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News