"ಪುರಭವನದ ಭೋಜನಶಾಲೆ ರಂಗಮಂದಿರವಾಗಿ ನಾಲಾಯಕ್ಕು"

Update: 2017-03-02 07:55 GMT

ಮಂಗಳೂರು, ಮಾ.2: ಪುರಭವನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಸಭಾಂಗಣವನ್ನು ಯಾವುದೇ ಕಾರಣಕ್ಕೂ ರಂಗಭೂಮಿಗೆ ವೇದಿಕೆಯಾಗಿ ಉಪಯೋಗಿಸಲು ಸಾಧ್ಯವಿಲ್ಲ. ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಯೋಗ್ಯವಾದ ಪರಿಸರವನ್ನು ಆ ವೇದಿಕೆ ಹೊಂದಿಲ್ಲ ಎಂದು ರಂಗಭೂಮಿ ನಿರ್ದೇಶಕರು, ಕಲಾವಿದರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
 

ತುಳು ರಂಗಭೂಮಿ ಹಾಗೂ ತುಳು ಚಲನಚಿತ್ರ ನಿರ್ದೇಶಕರೂ ಹಾಗಿರುವ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಸುದ್ದಿಗೋಷ್ಠಿಯಲ್ಲಿಂದು ನೂತನ ಸಭಾಂಗಣದ ಬಗ್ಗೆ ಬೇಸರಿಸುತ್ತಾ, ರಂಗ ಕಲಾವಿದರಿಗೆ ಸೂಕ್ತವಾದ ರೀತಿಯಲ್ಲಿ ವೇದಿಕೆ ಮರು ಸಜ್ಜುಗೊಳಿಸುವ ನಿಟ್ಟಿನಲ್ಲಿ ರಂಗ ತಜ್ಞರು ಹಾಗೂ ಕಲಾವಿದರನ್ನು ಸೇರಿಸಿ ಮಹಾನಗರ ಪಾಲಿಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪುರಭವನದ ದರವು ಕಲಾ ಚಟುವಟಿಕೆಗಳಿಗೆ ಕೈಗೆಟುಕದಂತಾಗಿದೆ. ಈ ಹಿನ್ನೆಲೆಯಲ್ಲಿ ಇದರ ಪಕ್ಕದಲ್ಲೇ ನಿರ್ಮಿಸಲಾದ ಭೋಜನಶಾಲೆಯನ್ನು ನಾಟಕ ಮೊದಲಾದ ರಂಗಭೂಮಿ ಚಟುವಟಿಕೆಗಳಿಗೆ ಉಪಯೋಗಿಸುವಂತೆ ರಚಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಅಲ್ಲಿ ಅಂತಹ ಯಾವುದೇ ವ್ಯವಸ್ಥೆ ಇಲ್ಲ. ರಂಗಭೂಮಿಯ ಬಗ್ಗೆ ಯಾವುದೇ ರೀತಿಯ ಜ್ಞಾನ ಇಲ್ಲದ ವಾಸ್ತುಶಿಲ್ಪಿಯಿಂದ ರಂಗಭೂಮಿಗೆ ಪೂರಕವಾದ ವೇದಿಕೆಗಳನ್ನು ನಿರ್ಮಿಸಲು ಸಾಧ್ಯವಾಗುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು. ರಂಗಭೂಮಿ ಕಲಾವಿದ, ನಿರ್ದೇಶಕರೂ ಆಗಿರುವ ವಿದು ಉಚ್ಚಿಲ್ ಮಾತನಾಡಿ, ನೂತನವಾಗಿ ನಿರ್ಮಿಸಲಾಗಿರುವ ಸಭಾಂಗಣದಲ್ಲಿ ಗ್ರೀನ್ ರೂಂ ವ್ಯವಸ್ಥೆ ಇಲ್ಲ. ಸುತ್ತಲೂ ವಾಹನಗಳ ಕರ್ಕಶ ಹಾರ್ನ್‌ಗಳ ಶಬ್ಧ ಸಭಾಂಗಣದೊಳಕ್ಕೂ ಕೇಳಿಸುತ್ತದೆ. ಕಲಾವಿದರನ್ನು ಉಳಿಸಿ, ಬೆಳೆಸುವ ಪರಿಕಲ್ಪನೆಯೇ ಇಲ್ಲದೆ ಈ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದನ್ನು ರಂಗವೇದಿಕೆಯಾಗಿ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News