ಕಾಳುಮೆಣಸು ಸಂಸ್ಕರಣೆಯತ್ತ ಕ್ಯಾಂಪ್ಕೋ: ಕೇಂದ್ರೀಯ ಸಂಶೋಧನಾ ಸಂಸ್ಥೆಯೊಂದಿಗೆ ಒಡಂಬಡಿಕೆ
ಮಂಗಳೂರು, ಮಾ.1: ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ವ್ಯಾವಹಾರಿಕವಾಗಿ ಮುನ್ನೆಡೆಯನ್ನು ಸಾಧಿಸುತ್ತಿರುವುದರ ಜೊತೆಗೆ ಔದ್ಯಮಿಕವಾಗಿ ವೈವಿಧ್ಯತೆಯತ್ತ ತನ್ನನ್ನು ತೆರೆದುಕೊಳ್ಳುತ್ತಿದೆ. ಆರಂಭದಲ್ಲಿ ಅಡಿಕೆಯಿಂದ ತೊಡಗಿ, ಬಳಿಕ ಕೊಕ್ಕೋ, ರಬ್ಬರ್ ಇದೀಗ ಕಾಳುಮೆಣಸು ಖರೀದಿಯನ್ನು ಆರಂಭಿಸುವುದರೊಂದಿಗೆ ಕೃಷಿಕರು ತಾವು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಪ್ರಯತ್ನಿಸುತ್ತಿದೆ. ಈ ಬಗೆಗೆ ಮಹಾಸಭೆಯಲ್ಲಿ ಅಂಗೀಕಾರ ಪಡೆದು ಉಪನಿಬಂಧನೆಗಳಲ್ಲಿ ಸೂಕ್ತ ತಿದ್ದುಪಡಿ ಮಾಡಲಾಗಿ ಇದೀಗ ಕಾಳುಮೆಣಸಿನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ.
ಸಂಸ್ಥೆ ತನ್ನ ವಿವಿಧ ಶಾಖೆಗಳ ಮೂಲಕ ಕಾಳುಮೆಣಸಿನ ಖರೀದಿ ಪ್ರಕ್ರಿಯಯನ್ನು ಈಗಾಗಲೇ ಆರಂಭಿಸಿದೆ. ಈ ಕ್ಷೇತ್ರದಲ್ಲಿ ತನ್ನ ವ್ಯವಹಾರವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆ(ಖ) ಯೊಂದಿಗೆ ಇದೇ 23.02.2017 ರಂದು ಮಂಗಳೂರಿನ ಕ್ಯಾಂಪ್ಕೋ ಕೇಂದ್ರ ಕಚೇರಿಯಲ್ಲಿ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಕೇರಳದ ಕೋಯಿಕ್ಕೋಡಿನಲ್ಲಿರುವ ಈ ಸಂಸ್ಥೆ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಅಂಖ) ಆಶ್ರಯದಲ್ಲಿ ಕಾರ್ಯವೆಸಗುತ್ತಿದೆ.
ಈ ಒಡಂಬಡಿಕೆಯನ್ವಯ, ಕೋಯಿಕ್ಕೋಡಿನಲ್ಲಿರುವ ಸಂಶೋಧನಾ ಸಂಸ್ಥೆಯ ಸಂಸ್ಕರಣ ಸೌಲಭ್ಯಗಳು ಕ್ಯಾಂಪ್ಕೋಗೆ ಲಭ್ಯವಾಗಲಿವೆ. ಈ ಸಂಸ್ಕರಣ ವ್ಯವಸ್ಥೆಯಡಿ ಕಪ್ಪು ಹಾಗೂ ಬಿಳಿ ಕಾಳುಮೆಣಸುಗಳ ಶುದ್ಧೀಕರಣ, ವರ್ಗೀಕರಣ ಮತ್ತು ಪೊಟ್ಟಣ ಕಟ್ಟುವಿಕೆಯನ್ನೊಳಗೊಂಡಂತೇ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ಇದರ ಜೊತೆಗೆ ಈ ವಿಷಯದಲ್ಲಿ ಅವಶ್ಯವಾಗಿರುವ ಸೂಕ್ತತರಬೇತಿ ಹಾಗೂ ತಾಂತ್ರಿಕ ಮಾರ್ಗದರ್ಶನಗಳು ಕ್ಯಾಂಪ್ಕೋಗೆ ಲಭ್ಯವಾಗಲಿದೆ. ಕ್ಯಾಂಪ್ಕೋ ಸಹಯೋಗದೊಂದಿಗೆ ಸಂಶೋಧನಾ ಸಂಸ್ಥೆಯ ಗುಣಮಟ್ಟ ದೃಢೀಕರಣ ಹೊಂದಿರುವ ಈ ಕಾಳುಮೆಣಸಿನ ಸಿದ್ಧ ಉತ್ಪನ್ನಗಳು ಸಂಶೋಧನಾ ಸಂಸ್ಥೆಯ ಸಂಸ್ಕರಣ ಘಟಕದಲ್ಲಿಯೇ ತಯಾರಾಗಲಿವೆ.
ಈ ಬಗ್ಗೆ ಭಾರತೀಯ ಸಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆ ಕೋಯಿಕ್ಕೋಡ್ ಇದರ ನಿರ್ದೇಶಕ ಡಾ. ಕೆ. ನಿರ್ಮಲಬಾಬು ಹಾಗೂ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಶ್ರೀ. ಸುರೇಶ್ ಭಂಡಾರಿಯವರು ಒಪ್ಪಂದಗಳಿಗೆ ಸಹಿ ಮಾಡಿದ್ದು, ಈ ಸಂದರ್ಭದಲ್ಲಿ ವಿಜ್ಞಾನಿಗಳಾದ ಡಾ.ಇ. ಜಯಶ್ರೀ ಹಾಗೂ ಡಾ.ವಿ ಶ್ರೀನಿವಾಸ್, ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ. ಎಸ್.ಆರ್.ಸತೀಶ್ಚಂದ್ರ, ಉಪಾಧ್ಯಕ್ಷ ಶ್ರೀ.ಕೆ.ಶಂಕರನಾರಯಣ ಭಟ್ ಖಂಡಿಗೆ, ನಿರ್ದೇಶಕರುಗಳಾದ ಶ್ರೀ.ಕಿಶೋರ್ ಕುಮಾರ್ ಕೊಡ್ಗಿ, ಶ್ರೀ.ಕೆ.ರಾಜಗೋಪಾಲನ್ ಮತ್ತು ಶ್ರೀ.ಶಂಭುಲಿಂಗ ಜಿ. ಹೆಗಡೆ ಉಪಸ್ಥಿತರಿದ್ದರು.