ಮುಖ್ಯ ನ್ಯಾಯಾಧೀಶರ ಕಾರು ಚಾಲಕನಾಗಿ ಶಿಷ್ಟಾಚಾರ ಅಧಿಕಾರಿಯ ಹುದ್ದೆಗೇರಿದ್ದ ವ್ಯಕ್ತಿಯೀಗ ಮತ್ತೆ ಚಾಲಕನಾದ
ಚಂಡಿಗಡ,ಮಾ.2: ರಾಜಬೀರ್ ಸಿಂಗ್ ತನ್ನ ವೃತ್ತಿಜೀವನದಲ್ಲಿ ಅದೃಷ್ಟದ ಕಮಾಲ್ ನಿಂದಾಗಿ ಕಾರು ಚಾಲಕ ಹುದ್ದೆಯಿಂದ ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಶಿಷ್ಟಾಚಾರ ಅಧಿಕಾರಿಯ ಹುದ್ದೆಯಲ್ಲಿ ಕುಳಿತಿದ್ದ. ಏಳು ವರ್ಷಗಳ ನಂತರ ಈಗ ಅದೇ ಅದೃಷ್ಟದ ಕಮಾಲ್‌ನಿಂದಾಗಿ ತಾನು ಎಲ್ಲಿಂದ ಪ್ರಾರಂಭಿಸಿದ್ದನೋ ಅಲ್ಲಿಗೇ ವಾಪಸಾಗಿದ್ದಾನೆ. ಮತ್ತದೇ ಕಾರು ಚಾಲಕ ಹುದ್ದೆ ಅವನಿಗೆ ಗಂಟು ಬಿದ್ದಿದೆ.
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಅಧಿಕೃತ ಕಾರಿನ ಚಾಲಕನಗಿದ್ದ ಸಿಂಗ್ 2005 ರಿಂದ 2015ರವರೆಗೆ ಕನಿಷ್ಠ 12 ಮುಖ್ಯ ನ್ಯಾಯಾಧೀಶರಿಂದ ತನ್ನ ವಾರ್ಷಿಕ ರಹಸ್ಯ ವರದಿಗಳಲ್ಲಿ ‘ಎ ಪ್ಲಸ್ ಔಟ್‌ಸ್ಟಾಂಡಿಂಗ್ ’ಗ್ರೇಡ್ ಕೃಪೆಯಿಂದಾಗಿ ಪಡೆದಿದ್ದ ಎಲ್ಲ ಬಡ್ತಿಗಳನ್ನು ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠವು ಬುಧವಾರ ಒಂದೇ ಹೊಡೆತಕ್ಕೆ ರದ್ದುಗೊಳಿಸಿಬಿಟ್ಟಿದೆ.
ಬಡ್ತಿಗೆ ಕಾಯುತ್ತಿದ್ದ ಇತರರನ್ನು ಕಡೆಗಣಿಸಿ 2010ರಲ್ಲಿ ಸಿಂಗ್‌ಗೆ ಹಿರಿಯ ಸಹಾಯಕನಾಗಿ ಬಡ್ತಿ ನೀಡಲಾಗಿತ್ತು ಮತ್ತು ಬಳಿಕ 2014, ಜುಲೈನಲ್ಲಿ ಅಧೀಕ್ಷಕ ದರ್ಜೆ-II (ಉಪ ಅಧೀಕ್ಷಕ) ಕ್ಕೆ ಬಡ್ತಿಗೊಳಿಸಿ ಮುಖ್ಯ ನ್ಯಾಯಾಧೀಶರ ಶಿಷ್ಟಾಚಾರ ಅಧಿಕಾರಿಯನ್ನಾಗಿ ನಿಯೋಜಿಸಲಾಗಿತ್ತು. ಈಗ ನಿವೃತ್ತರಾಗಿರುವ ಆಗಿನ ಮುಖ್ಯ ನ್ಯಾಯಾಧೀಶ ಮುಕುಲ್ ಮುದ್ಗಲ್ ಅವರು 2010ರಲ್ಲಿ ಸಿಂಗ್‌ಗೆ ಬಡ್ತಿ ನೀಡಿದ್ದರೆ, ನಂತರದ ಬಡ್ತಿಯನ್ನು ಆಗ ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಎಸ್.ಕೆ.ಕೌಲ್ ಅವರು ಮದ್ರಾಸ್ ಉಚ್ಚ ನ್ಯಾಯಾಲಯ ಕ್ಕೆ ತನ್ನ ವರ್ಗಾವಣೆಗೆ ಮುನ್ನ ನೀಡಿದ್ದರು. ಕೌಲ್ ಹಾಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದಾರೆ.
ಸಿಂಗ್ ಬಡ್ತಿಯನ್ನು ಸಮರ್ಥಿಸಿಕೊಂಡಿದ್ದ ಹೈಕೋರ್ಟ್ ಆಡಳಿತವು, ಮುಖ್ಯ ನ್ಯಾಯಾಧೀಶರು ಅಗತ್ಯಕ್ಕನುಗುಣವಾಗಿ ಯಾವುದೇ ವ್ಯಕ್ತಿಯನ್ನು ಉಚ್ಚ ನ್ಯಾಯಾಲಯದಲ್ಲಿ ಯಾವುದೇ ಹುದ್ದೆಗೆ ನೇಮಕಗೊಳಿಸುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಿತ್ತು.
ಸಿಂಗ್‌ಗೆ ನೀಡಿದ್ದ ಬಡ್ತಿಗಳನ್ನು ಉಚ್ಚ ನ್ಯಾಯಾಲಯದ 18 ಹಿರಿಯ ಸಹಾಯಕರು ಪ್ರಶ್ನಿಸಿದ್ದರು. ಇವರೆಲ್ಲರನ್ನು ಕಡೆಗಣಿಸಿ ಸಿಂಗ್‌ಗೆ ಬಡ್ತಿ ನೀಡಲಾಗಿತ್ತು.
ಸಿಂಗ್‌ಗೆ ಬಡ್ತಿ ನೀಡಲಾಗಿದ್ದ ದಿನಾಂಕದಿಂದ ತಮಗೆ ಬಡ್ತಿಗೆ ನಿರ್ದೇಶ ಕೋರಿದ್ದ ಅರ್ಜಿದಾರರು ಸೇವಾ ನಿಯಮಾವಳಿಗಳ ಅನ್ವಯ ಚಾಲಕ ಹುದ್ದೆಯಲ್ಲಿರುವ ವ್ಯಕ್ತಿಗೆ ಹಿರಿಯ ಸಹಾಯಕನ ಹುದ್ದೆಗೆ ಬಡ್ತಿ ನೀಡುವಂತಿಲ್ಲ, ಆತನಿಗೆ ನೀಡಬಹುದಾದ ಅತ್ಯುನ್ನತ ಹುದ್ದೆಯೆಂದರೆ ಚಾಲಕರ ಸೂಪರ್‌ವೈಸರ್ ಮಾತ್ರ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.