ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ದೇಶದ ಘನತೆ ಅಡಗಿದೆ: ನ್ಯಾ. ಡಾ.ಕುಮಾರ್
ಮಂಗಳೂರು, ಮಾ.2: ಮಾನವ ಹಕ್ಕುಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಅವುಗಳ ಸಂರಕ್ಷಣೆಯಲ್ಲಿ ದೇಶದ ಘನತೆ ಅಡಗಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಡಾ. ಎನ್. ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಹಾಗೂ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ರೋಶನಿ ನಿಲಯ ಕಾಲೇಜಿನಲ್ಲಿ ಗುರುವಾರ ನಡೆದ ಮಾನವ ಹಕ್ಕುಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಯಾವುದೇ ದೇಶ, ಸಂಸ್ಕೃತಿ, ಸಮುದಾಯಗಳಲ್ಲಿ ಮಾನವ ಹಕ್ಕುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜಾತಿ, ಧರ್ಮಕ್ಕಿಂತ ಮಾನವೀಯತೆ ಯಾವಾಗಲೂ ಶ್ರೇಷ್ಠ ಸ್ಥಾನವನ್ನು ಹೊಂದಿದೆ ಎಂದು ನ್ಯಾ. ಡಾ. ಎನ್. ಕುಮಾರ್, 2ನೆ ಮಾಹಾಯುದ್ಧದ ಸಮಯದಲ್ಲಿ ಸಮಾನತೆ ಇರಲಿಲ್ಲ. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು. ಪ್ರಸ್ತುತ ಪ್ರಪಂಚ ಹಾಗೂ ಪ್ರಾದೇಶಿಕವಾಗಿ ನಡೆಯುವ ಕಾರ್ಯಕ್ರಮ, ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ ಎಂದರು.
ಸಂವಿಧಾನವು ಪ್ರಜೆಗಳಿಗೆ ಮೂಲಭೂತ ತತ್ವಗಳು, ಕರ್ತವ್ಯಗಳು, ಹಕ್ಕುಗಳನ್ನು ನೀಡಿದೆ. ಮಾನವ ಹಕ್ಕುಗಳು ಮಾನವೀಯತೆಯ ಸಾಮಾನ್ಯ ಭಾಷೆಯಾಗಿದೆ. ಒಂದು ಶತಮಾನದಿಂದ ಮಾನವ ಹಕ್ಕುಗಳ ಉಳಿವಿಗೆ ಪ್ರಪಂಚದೆಲ್ಲೆಡೆ ಹೋರಾಟ, ಚಳವಳಿಗಳು ನಡೆಯುತ್ತಿವೆ. ಮಾನವ ಹಕ್ಕುಗಳು ಮೂಲಭೂತವಾದ ಹಕ್ಕುಗಳಾಗಿವೆ. ಇದರಿಂದ ಸಮಾನವಾಗಿ ಜೀವನ ನಡೆಸಬಹುದಾಗಿದೆ. ಮೂಲಭೂತ ಹಕ್ಕುಗಳು, ತತ್ವಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದು ನ್ಯಾ. ಡಾ. ಎನ್. ಕುಮಾರ್ ಹೇಳಿದರು.
ಯಾರಿಗೂ ಕಿರುಕುಳ, ಶಿಕ್ಷೆ ನೀಡುವ ಹಕ್ಕಿಲ್ಲ. ಒಂದು ವೇಳೆ ಕಿರುಕುಳ ನೀಡಿದ್ದಲ್ಲಿ ಅದು ಅಪರಾಧವಾಗುವುದು. ಬುದ್ಧಿಮಾಂದ್ಯರಿಗೆ, ವಿಕಲಚೇತನರಿಗೆ ಸಮಾಜದಲ್ಲಿ ಗೌರವವನ್ನು ನೀಡಲಾಗುತ್ತಿಲ್ಲ. ಅವರಿಗೂ ಸ್ವಾಭಿಮಾನವಿದೆ. ಸಮಾನ ರಕ್ಷಣೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನ್ಯಾ. ಡಾ. ಎನ್. ಕುಮಾರ್ ಹೇಳಿದರು.
ಬೆಂಗಳೂರಿನ ನಿಮ್ಹಾನ್ಸ್‌ನ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ರೋಶನಿ ನಿಲಯದ ಪ್ರಾಂಶುಪಾಲೆ ಡಾ. ಸೋಫಿಯಾ ಎನ್. ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ನ್ಯಾ. ಡಾ.ಎನ್. ಕುಮಾರ್ ಱಬುಕ್ ಆಫ್ ಎಕ್ಸ್‌ಟ್ರಾಕ್ಟ್‌ೞನ್ನು ಬಿಡುಗಡೆಗೊಳಿಸಿದರು. ನಿಮ್ಹಾನ್ಸ್‌ನ ರಿಜಿಸ್ಟ್ರಾರ್ ಡಾ. ಕೆ. ಶೇಖರ್ ಱವೌನೞಸಾಕ್ಷಚಿತ್ರವನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ರೋಶನಿ ನಿಲಯದ ರಿಜಿಸ್ಟ್ರಾರ್ ಡಾ. ಎಲ್.ಎನ್. ಭಟ್, ನಿಮ್ಹಾನ್ಸ್‌ನ ಡಾ. ಅನಿಶ್ ಚೆರಿಯನ್, ಶೈಲಜಾ ಸಂತೋಷ್ ಉಪಸ್ಥಿತರಿದ್ದರು.
ಸಂಚಾಲಕಿ ಡಾ. ರಮೀಳಾ ಶೇಖರ್ ಸ್ವಾಗತಿಸಿದರು. ಸುಶ್ಮಿತಾ, ಗುಕಾತೋಲಿ ಯೆಪ್ಪೊ ಕಾರ್ಯಕ್ರಮ ನಿರೂಪಿಸಿದರು. ಡಾ. ಮೀನಾ ಮೊಂತೆರಿಯೊ ವಂದಿಸಿದರು.