ಮಂಗಳೂರು: ಮಾ.10ರಂದು ಸಿಪಿಐನಿಂದ ಜನಾಗ್ರಹ ಚಳವಳಿ
ಮಂಗಳೂರು, ಮಾ. 2: ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ನೇತೃತ್ವದಲ್ಲಿ ಮಾ. 10ರಂದು ರಾಜ್ಯಾದ್ಯಂತ ಬಜೆಟ್ ಪೂರ್ವ ಜನಾಗ್ರಹ ಚಳವಳಿ ನಡೆಯಲಿರುವುದರಿಂದ ಅಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯೆದುರು ಬೆಳಗ್ಗೆ ಗಂಟೆ 10:30ಕ್ಕೆ ಸರಿಯಾಗಿ ಈ ಚಳವಳಿ ನಡೆಯಲಿದೆ.
ಕರ್ನಾಟಕ ರಾಜ್ಯ ಹಿಂದೆಂದೂ ಕಾಣದ ಸತತ ಬರಗಾಲಕ್ಕೆ ತುತ್ತಾಗಿ ರಾಜ್ಯದ 176 ತಾಲೂಕುಗಳ ಪೈಕಿ 160 ತಾಲೂಕುಗಳಲ್ಲಿ ಭೀಕರ ಬರ ಆವರಿಸಿದೆ. ಈ ವರ್ಷದ ಮುಂಗಾರು ಮಳೆ ಹಾಗೂ ಹಿಂಗಾರು ಮಳೆ ವಿಫಲತೆಯಿಂದ ಸುಮಾರು 25 ಸಾವಿರ ಕೋಟಿ ರೂ.ಗಳಷ್ಟು ರೈತರ ಬೆಳೆ ನಷ್ಟವಾಗಿದೆ ಎಂದು ಸರಕಾರ ಅಂದಾಜಿಸಿದೆ. ಕೈಗೆ ಬಂದ ಅಲ್ಪಸ್ವಲ್ಪ ಬೆಲೆಯೂ ನೋಟು ರದ್ದತಿಯಿಂದ ನಷ್ಟವಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ನಿತ್ಯದ ಬದುಕಿಗಾಗಿ ಉದ್ಯೋಗ ಸಮರ್ಪಕವಾಗಿಲ್ಲದೆ ಬದುಕು ಕಷ್ಟವಾಗಿದೆ.
ಈ ಸಂಕಷ್ಟ ನಿವಾರಣೆಗೆ ಕೇಂದ್ರದ ಮೋದಿ ಸರಕಾರ ಬಜೆಟ್‌ನಲ್ಲಿ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರದಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಸಾಲ ಮನ್ನಾಕ್ಕೆ ಒತ್ತಾಯಿಸುವ ಬಿಜೆಪಿ ಕೇಂದ್ರದಲ್ಲಿನ ತಮ್ಮದೇ ಪಕ್ಷದ ಸರಕಾರದಿಂದ ರೈತರ ಸಾಲ ಮನ್ನಾದ ಶೇಕಡಾ 50ರಷ್ಟಾದರೂ ಪಾಲು ಮಂಜೂರು ಮಾಡಿಸದೆ ಅರೋಪ ಪ್ರತ್ಯಾರೋಪಗಳ ರಾಜಕಾರಣ ಮಾಡುತ್ತಿದೆ.
ಗ್ಯಾಸ್ ಸಿಲಿಂಡರ್ ಬೆಲೆ ಏರಿಸುತ್ತಿರುವ ಕೇಂದ್ರ ಸರಕಾರ ವೇತನ ಆಯೋಗದ ಶಿಫಾರಸನ್ನು ಅಂಗೀಕರಿಸಿದ್ದರೂ 18 ಸಾವಿರ ರೂ.ಗಳ ಕನಿಷ್ಠ ವೇತನದ ಶಿಫಾರಸನ್ನು ಅಂಗನವಾಡಿ, ಬಿಸಿಯೂಟ, ಆಶಾ ಇತ್ಯಾದಿ ಕೇಂದ್ರದ ಯೋಜನೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಜಾರಿಗೊಳಿಸಿಲ್ಲ. ರಾಜ್ಯ ಸರಕಾರವೂ ನಿಗದಿ ಮಾಡಿರುವ ಕನಿಷ್ಠ ವೇತನವನ್ನು ತನ್ನದೇ ಕೈಕೆಳಗೆ ಗೌರವಧನ, ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ಇತ್ಯಾದಿ ಹೆಸರಿನಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಹಾಗೂ ಇತರ ಅಸಂಘಟಿತ ಕಾರ್ಮಿಕರಿಗೆ ನೀಡುತ್ತಿಲ್ಲ.
ಈ ಎಲ್ಲಾ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಬಜೆಟನ್ನು ತಯಾರಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಲು ಸಿಪಿಐದ ನೇತೃತ್ವದಲ್ಲಿ ರಾಜ್ಯದಾದ್ಯಂತ ಬಜೆಟ್ ಪೂರ್ವ ಜನಾಗ್ರಹ ಚಳವಳಿ ನಡೆಯಲಿದೆ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.