ರಾಮ್‌ಜಸ್ ಕಾಲೇಜು ಘರ್ಷಣೆ ಪ್ರಕರಣ: ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಂಡ ಪೊಲೀಸರು
ಹೊಸದಿಲ್ಲಿ, ಮಾ.2: ರಾಮಜಾಸ್ ಕಾಲೇಜಿನಲ್ಲಿ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸ್‌ನ ಅಪರಾಧ ಪತ್ತೆ ವಿಭಾಗ ಸೈಂಟ್ ಸ್ಟೀಫನ್ಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಇವರಿಬ್ಬರ ಮೇಲೆ ಎಬಿವಿಪಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಇವರಲ್ಲಿ ಓರ್ವ ವಿದ್ಯಾರ್ಥಿನಿಯೂ ಸೇರಿದ್ದಾಳೆ. ತಾನು ಸಹಪಾಠಿ ವಿದ್ಯಾರ್ಥಿಯೊಂದಿಗೆ ರಮಜಾಸ್ ಕಾಲೇಜು ಕ್ಯಾಂಟೀನಿನ ಹೊರಭಾಗದಲ್ಲಿ ನಿಂತಿದ್ದಾಗ ತಮ್ಮ ಮೇಲೆ ಎಬಿವಿಪಿ ಬೆಂಬಲಿಗರು ಹಲ್ಲೆ ನಡೆಸಿದ್ದು ಅವರು ಎಸೆದ ಕಲ್ಲಿನಿಂದ ತನಗೆ ಗಾಯವಾಗಿದೆ ಎಂದು ಆಕೆ ದೂರಿದ್ದಾಳೆ. ಎರಡೂ ಕಡೆಯ ಸುಮಾರು 25 ವಿದ್ಯಾರ್ಥಿಗಳು ದೂರು ನೀಡಿದ್ದು ವಿದ್ಯಾರ್ಥಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಗೆ ಸಹಕರಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದೇವೆ. ಎಐಎಸ್‌ಎ ಬೆಂಬಲಿಗ ವಿದ್ಯಾರ್ಥಿಗಳು ಹೇಳಿಕೆ ದಾಖಲಿಸಿಕೊಳ್ಳಲು ಮುಂದೆ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ನಮ್ಮ ಇ-ಮೇಲ್ ಐಡಿ ನೀಡಿದ್ದು ಸುಮಾರು 25 ಮಂದಿ ದೂರು ದಾಖಲಿಸಿದ್ದಾರೆ. ಹೆಚ್ಚಿನ ದೂರುಗಳು ಗೂಂಡಾಗಿರಿ ಮತ್ತು ಪೀಡನೆ ಕುರಿತಾಗಿದೆ . ಆದರೆ ಯಾರೊಬ್ಬರೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ರಾಮಜಾಸ್ ಕಾಲೇಜಿನ ಅಧಿಕಾರಿಗಳನ್ನು ಭೇಟಿ ಮಾಡಿರುವ ದಿಲ್ಲಿ ಪೊಲೀಸ್‌ನ ಹಿರಿಯ ಅಧಿಕಾರಿಗಳು, ಕಾಲೇಜಿನಲ್ಲಿರುವ ವಿಭಿನ್ನ ಸೈದ್ಧಾಂತಿಕ ಮನೋಭಾವದ ವಿದ್ಯಾರ್ಥಿಗಳು ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿಭಿನ್ನ ಸಿದ್ಧಾಂತವಾದಿಗಳ ನಡುವೆ ಚರ್ಚೆ ಅಗತ್ಯವಾಗಿ ಬೇಕು. ಆದರೆ ಇದು ಹಿಂಸೆಯ ರೂಪಕ್ಕೆ ತಿರುಗಲು ಬಿಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿ ಆವರಣದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ದಿಲ್ಲಿ ವಿವಿಗೆ ಸೇರಿದ ಇತರ ಕಾಲೇಜುಗಳ ಪ್ರಾಂಶುಪಾಲರೊಡನೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ರಾಮಜಾಸ್ ಕಾಲೇಜಿನಲ್ಲಿ ಇತ್ತೀಚೆಗೆ ಎಐಎಸ್‌ಎ ಮತ್ತು ಎಬಿವಿಪಿ ಬೆಂಬಲಿಗ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದಿತ್ತು.