×
Ad

ಪಕ್ಷದೊಳಗಿನ ಭಿನ್ನಮತದಿಂದ ಹತಾಶೆ : ಅಖಿಲೇಶ್ ಎದುರೇ ವೇದಿಕೆಯಲ್ಲಿ ಕಣ್ಣೀರಿಟ್ಟ ಅಭ್ಯರ್ಥಿ

Update: 2017-03-02 20:51 IST

 ಲಕ್ನೊ, ಮಾ.2: ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆ ಎಂದರೆ ಅಲ್ಲಿ ಒಂದಿಷ್ಟು ನಾಟಕೀಯ ಘಟನೆಗಳು ಇರಲೇ ಬೇಕು. ಇದಕ್ಕೆ ಪೂರಕವಾಗಿ, ಪ್ರಚಾರ ಸಭೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯೋರ್ವರು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎದುರೇ ವೇದಿಕೆಯಲ್ಲಿ ಗಳಗಳನೆ ಅತ್ತುಬಿಟ್ಟ ಘಟನೆ ನಡೆದಿದೆ. ತನ್ನ ವಿರುದ್ಧ ಪಕ್ಷದ ಸದಸ್ಯರೇ ಷಡ್ಯಂತ್ರ ನಡೆಸುತ್ತಿದ್ದು ತನ್ನ ಗೆಲುವಿಗೆ ತಡೆಯಾಗಿದ್ದಾರೆ ಎಂಬ ಅಭ್ಯರ್ಥಿಯ ಹತಾಶೆ ಇದಕ್ಕೆ ಕಾರಣ ಎನ್ನಲಾಗಿದೆ.

 ರಾಜ್ಯದ ದಿಯೋರಿಯಾ ಜಿಲ್ಲೆಯ ಬರ್ಹಾಜ್ ವಿಧಾನಸಭಾ ಕ್ಷೇತ್ರದ ಎಸ್ಪಿ ಪಕ್ಷದ ಅಭ್ಯರ್ಥಿ ಪಿ.ಡಿ.ತಿವಾರಿ ಹೀಗೆ ವೇದಿಕೆಯಲ್ಲೇ ಕಣ್ಣೀರಿಟ್ಟವರು. ಶನಿವಾರ ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು ಇದರ ಪ್ರಚಾರಾರ್ಥ ಸಭೆ ನಡೆದಿತ್ತು. ಮೊದಲು ಮಾತನಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿಯು ಉತ್ತರಪ್ರದೇಶದಲ್ಲಿ ಪ್ರತಿಯೊಂದು ಸ್ಥಾನವನ್ನೂ ಹೆಕ್ಕಿ ತೆಗೆಯಲಿದೆ (ಚುನ್ ಚುನ್ ಕೆ) ಎಂದು ಪ್ರಧಾನಿ ಮೋದಿ ಸವಾಲೆಸೆದಿದ್ದಾರೆ. ಆಯ್ತು ನೋಡುವಾ, ಅದ್ಹೇಗೆ ಅವರು ಬರ್ಹಾಜ್ ಸ್ಥಾನವನ್ನು ಪಡೆಯುತ್ತಾರೆ ಎಂದು - ಎಂಬ ಪ್ರೋತ್ಸಾಹದ ನುಡಿಯನ್ನಾಡಿದರು. ಅಖಿಲೇಶ್ ಯಾದವ್ ಭಾಷಣಕ್ಕೆ ಸಭಿಕರಿಂದ ಹರ್ಷೋದ್ಗಾರ ಕೇಳಿ ಬಂದಾಗ ಖುಷಿಯಿಂದ ಉಬ್ಬಿಹೋದ ತಿವಾರಿ, ಮೈಕ್ ಎದುರು ನಿಲ್ಲುತ್ತಿದ್ದಂತೆ ಭಾವೋದ್ವೇಗದಿಂದ ಕಣ್ಣೀರಿಟ್ಟರು. ತಕ್ಷಣ ಅವರ ಬೆಂಬಲಿಗರು ತಿವಾರಿಯನ್ನು ವೇದಿಕೆಯ ಮರೆಗೆ ಕೊಂಡೊಯ್ದರು. ವಿಷಯ ಅರ್ಥವಾಗದೆ ಒಂದರೆಕ್ಷಣ ಅಖಿಲೇಶ್ ಕೂಡಾ ಗಲಿಬಿಲಿಗೊಂಡರು. ಪಕ್ಷದೊಳಗಿನ ಕೆಲವರು ತನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂಬುದು ಅವರ ಹತಾಶೆಗೆ ಕಾಣ ಎಂದು ಬಳಿಕ ಅವರ ಬೆಂಬಲಿಗರು ತಿಳಿಸಿದರು.

 ಇದೇ ರೀತಿಯ ಘಟನೆ ಬುಲಂದ್‌ಶಹರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲೂ ನಡೆದಿತ್ತು. ಸಮಾಜವಾದಿ ಪಕ್ಷದ ಅಭ್ಯರ್ಥಿ ಶುಜತ್ ಆಲಂ ಇಲ್ಲಿ ಬಿಎಸ್‌ಪಿ ಅಭ್ಯರ್ಥಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪ್ರಚಾರ ಸಭೆಯಲ್ಲಿ ಶುಜತ್ ತನ್ನ ಬೂಟಿನಿಂದ ತನ್ನ ತಲೆಗೇ ಹೊಡೆದುಕೊಂಡು- ನಾನೇನಾದರೂ ತಿಳಿಯದೆ ತಪ್ಪು ಮಾಡಿದರೆ ಕ್ಷಮಿಸಿಬಿಡುವಂತೆ- ಮತದಾರರನ್ನು ವಿನಂತಿಸಿದ್ದರು. ಕಳೆದ ಎರಡು ಚುನಾವಣೆಗಳಲ್ಲೂ ಈ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ಶುಜತ್, ಈ ಬಾರಿ ಇಂತಹ ಗಿಮಿಕ್ ಮೂಲಕ ಗೆಲ್ಲಲು ಶತಾಯ ಗತಾಯ ಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಮಾರ್ಚ್ 11ರಂದು ಫಲಿತಾಂಶ ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News