×
Ad

ಕರ್ನಾಟಕದ ಶೇ.42 ಸಹಕಾರ ಸಂಸ್ಥೆ ನಷ್ಟದಲ್ಲಿ: ಮನುಮುತ್ತಪ್ಪ

Update: 2017-03-02 21:23 IST

ಉಡುಪಿ, ಮಾ.2: ವಿವಿಧ ಕಾರಣಗಳಿಗಾಗಿ ಕರ್ನಾಟಕದ ಶೇ.42ರಷ್ಟು ಸಹಕಾರ ಸಂಸ್ಥೆಗಳು ಇಂದು ನಷ್ಟದಲ್ಲಿವೆ. ಇವುಗಳಲ್ಲಿ ಶೇ.11ರಷ್ಟು ಸಂಸ್ಥೆಗಳು ಸಂಪೂರ್ಣ ನಿಷ್ಕೃಿಯವಾಗಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಮನುಮುತ್ತಪ್ಪ ಎ.ಕೆ. ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ/ ಹಾಗೂ ಬ್ಯಾಂಕಿಂಗ್ ವ್ಯವಹಾರ ನಡೆಸುವ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳಿಗೆ ರಾಜ್ಯಮಟ್ಟದ ಆಡಳಿತ ನಿರ್ವಹಣಾ ತರಬೇತಿ ಶಿಬಿರವನ್ನು ನಗರದ ಪುರಭವನದಲ್ಲಿ ಉದ್ಘಾಟಿಸಿ ಮಾತನಾಡುತಿದ್ದರು.

ನಷ್ಟದಲ್ಲಿರುವ ಸಹಕಾರಿ ಸಂಸ್ಥೆಗಳನ್ನು ಸರಿದಾರಿಗೆ ತಂದು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಿದೆ. ಆದರೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಸಹಕಾರಿ ಸಂಸ್ಥೆಗಳು ತಮ್ಮ ಪಾರದರ್ಶಕ ಹಾಗೂ ಪ್ರಬುದ್ಧ ಆಡಳಿತ ವ್ಯವಸ್ಥೆಯಿಂದ ಬಲಿಷ್ಠವಾಗಿ ಲಾಭದಾಯಕವಾಗಿ ನಡೆಯುತ್ತಿವೆ ಎಂದವರು ನುಡಿದರು.

 ಮುಂದಿನ ಮೂರು ವರ್ಷಗಳಲ್ಲಿ ಸಹಕಾರಿ ಕ್ಷೇತ್ರದ ಎಲ್ಲಾ ಸಂಸ್ಥೆಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯದ ಸುಮಾರು 65,000 ಸಹಕಾರಿ ಸಂಸ್ಥೆಗಳಿಗೆ ಒಟ್ಟು 1,900 ಕೋಟಿ ರೂ.ಗಳನ್ನು ವ್ಯಯಿಸಲಿದೆ. ಇದರಿಂದ ಕೇಂದ್ರ ಸರಕಾರದ ಕ್ಯಾಶ್‌ಲೆಸ್ ವ್ಯವಹಾರವನ್ನು, ಡಿಜಿಟಲೀಕರಣವನ್ನು ಜಾರಿಗೊಳಿಸಲು ಇವುಗಳಿಗೆ ಸಾಧ್ಯವಾಗಲಿದೆ. ಅಲ್ಲದೇ ಶೇ.100ರಷ್ಟು ಭ್ರಷ್ಟಾಚಾರ ರಹಿತವಾಗಿ ನಡೆಯಲು ಸಾಧ್ಯವಾಗಲಿದೆ ಎಂದು ಮನುಮುತ್ತಪ್ಪ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ, ನ.8ರ ಬಳಿಕ ಜಿಲ್ಲೆಯ ಯಾವುದೇ ಸಹಕಾರಿ ಸಂಸ್ಥೆಗಳು ಅನಧಿಕೃತ ವ್ಯವಹಾರಗಳನ್ನು ನಡೆಸಿಲ್ಲ. ಜಿಲ್ಲೆಯ ಸಹಕಾರಿ ವ್ಯವಸ್ಥೆ ಬಲಿಷ್ಠವಾಗಿದ್ದು, ಇವುಗಳಿಗೆ ಪರ್ಯಾಯಗಳಿಲ್ಲ ಎಂದರು.

ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಪರ ಆಯುಕ್ತ ಆರ್.ಎನ್. ಸಿದ್ಧಪ್ಪಾಜಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್, ಯೂನಿಯನ್‌ನ ಉಪಾಧ್ಯಕ್ಷ ಕೆ.ಸುರೇಶ್ ರಾವ್, ಕೋಶಾಧಿಕಾರಿ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಂಯೋಜನಾಧಿಕಾರಿ ಬಿ.ಸಿ. ಶಿವಾನಂದ, ಆಡಳಿತ ಮಂಡಳಿ ಸದಸ್ಯರಾದ ಗೋಪಿಕೃಷ್ಣ ರಾವ್, ವೈ.ಸುಧೀರ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

 ಅಶೋಕಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಬಿ.ಜಗದೀಶ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News