ಮಂಗಳೂರು: ಮಾ.3ರಂದು ಡಾ.ಬಿ.ಎ.ವಿವೇಕ ರೈ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

Update: 2017-03-02 16:28 GMT

ಮಂಗಳೂರು, ಮಾ. 3: ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಮಾ.3ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 35ನೆ ವಾರ್ಷಿಕ ಘಟಿಕೋತ್ಸವದಲ್ಲಿ ಹಂಪಿ ವಿವಿ ಮತ್ತು ಕರ್ನಾಟಕ ಮುಕ್ತ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.

ಡಾ..ಬಿ.ಎ. ವಿವೇಕ್ ರೈ ಅವರ ಪರಿಚಯ: 

ಡಾ.ಬಿ.ಎ.ವಿವೇಕ ರೈ ಅವರು 8 ಡಿಸೆಂಬರ್ 1946 ರಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪುಣಚಾ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು . ಪುಣಚಾ ಪರಿಯಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು, ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ 1967ರಲ್ಲಿ ಬಿ ಎಸ್ಸಿ ಪದವಿಯನ್ನು ಪಡೆದರು . 1968ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಮೊದಲ ತಂಡದ ವಿದ್ಯಾರ್ಥಿಯಾಗಿ ಸೇರಿ,  ಕನ್ನಡ ಎಂ ಎ ಪದವಿಯನ್ನು ಪ್ರಥಮ ದರ್ಜೆ ಮತ್ತು ಪ್ರಥಮ ಸ್ಥಾನದೊಂದಿಗೆ ಪಡೆದರು.

ತಾನು ಕಲಿತ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯ ಕನ್ನಡ ವಿಭಾಗದಲ್ಲಿ 1970ರಲ್ಲಿ ಅಧ್ಯಾಪಕನಾಗಿ ಸೇರಿ, ವಿಭಾಗ ಮುಖ್ಯಸ್ಥರಾಗಿದ್ದ ಪ್ರೊ .ಎಸ್ ವಿ ಪರಮೇಶ್ವರ ಭಟ್ಟರ ಜೊತೆಗೆ ವಿಭಾಗ ಮತ್ತು ಮಂಗಳಗಂಗೋತ್ರಿ ಕೇಂದ್ರವನ್ನು ಕಟ್ಟಿ ಬೆಳೆಸಿದರು .ಡಾ.ಹಾ .ಮಾ. ನಾಯಕರ ಮಾರ್ಗದರ್ಶನದಲ್ಲಿ ’ತುಳು ಜನಪದ ಸಾಹಿತ್ಯ’ ದ ಬಗ್ಗೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ 1981ರಲ್ಲಿ ತುಳು ಜಾನಪದದ ಮೊತ್ತಮೊದಲನೆಯ ಪಿ ಎಚ್ ಡಿ ಪದವಿಯನ್ನು ಪಡೆದರು .

ಡಾ.ವಿವೇಕ ರೈಯವರು ಕನ್ನಡ ವಿಶ್ವವಿದ್ಯಾಲಯ , ಹಂಪಿಯ ಕುಲಪತಿಯಾಗಿ ಅಲ್ಲಿ ಬಹುಮುಖಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯೋಜಿಸಿ ಕಾರ್ಯರೂಪಕ್ಕೆ ತಂದರು .ರಾಜ್ಯಸರಕಾರ ಮತ್ತು ಯುಜಿಸಿ ಯಿಂದ ಅನೇಕ ಯೋಜನೆಗಳನ್ನು ಮತ್ತು ಅನುದಾನಗಳನ್ನು ತಂದು, ಕರ್ನಾಟಕದ ಸಾಂಸ್ಕೃತಿಕ ಸಂಶೋಧನೆಗೆ ಹೊಸದಿಕ್ಕನ್ನು ತೋರಿಸಿಕೊಟ್ಟರು.

ಪ್ರೊ.ರೈಯವರು  ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದಲ್ಲಿ ಯುರೋಪಿಯನ್ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಬೋಧಿಸಿದ್ದಾರೆ , ಆಸಕ್ತರಿಗಾಗಿ ಕನ್ನಡಬೇಸಿಗೆ ಶಿಬಿರಗಳನ್ನು ನಡೆಸಿದ್ದಾರೆ, ಕನ್ನಡ ಸಾಹಿತ್ಯ ಮತ್ತು ತುಳು ಜಾನಪದದ ಬಗ್ಗೆ ಉಪನ್ಯಾಸಗಳನ್ನು ಕೊಟ್ಟಿದ್ದಾರೆ, ಕನ್ನಡ ಮತ್ತು ತುಳುವನ್ನು ಹೊರಜಗತ್ತಿಗೆ ಅನಾವರಣ ಮಾಡಿದ್ದಾರೆ.

ವಿವೇಕ ರೈಯವರು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸ್ಥಾಪಕ ಅಧ್ಯಕ್ಷರಾಗಿ ಅವಧಿಯಲ್ಲಿ ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಶೈಕ್ಷಣಿಕ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ತುಳು ಸಾಹಿತ್ಯ ರಚನೆಗೆ ಕಮ್ಮಟಗಳನ್ನು ನಡೆಸಿ , ಅಕಾಡಮಿಯ ವತಿಯಿಂದ 57 ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಹೊಸ ಲೇಖಕರ ತಲೆಮಾರು ನಿರ್ಮಾಣವಾಗಲು ಶ್ರಮಿಸಿದ್ದಾರೆ, ದಲಿತ ಮತ್ತು ಬುಡಕಟ್ಟು ಸಮುದಾಯಗಳ ಸಂಸ್ಕೃತಿಗಳ ಅನಾವರಣ ಮಾಡಿದ್ದಾರೆ.

ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಆಡಳಿತ ಮಂಡಳಿಯ ಸದಸ್ಯರಾಗಿ, ಸಂಸ್ಕೃತಿಗ್ರಾಮ ಯೋಜನೆಯ ನಿರ್ದೇಶಕರಾಗಿ ತುಳುನಾಡಿನ ಸಂಸ್ಕೃತಿಯ ಪುನರುಜ್ಜೀವನದ ಯೋಜನೆಗಳಿಗೆ ಚಾಲನೆಯನ್ನು ಕೊಟ್ಟಿದ್ದಾರೆ.

ಸಾಹಿತಿಯಾಗಿ ಸಂಶೋಧಕರಾಗಿ ರೈ ಅವರು  ವಿಶೇಷ ಸಾಧನೆ ಮಾಡಿದ್ದಾರೆ. ಅವರ ಒಟ್ಟು 43 ಗ್ರಂಥಗಳು ಪ್ರಕಟವಾಗಿವೆ . ಕನ್ನಡದಲ್ಲಿ ಸ್ವತಂತ್ರ ಮತ್ತು ಅನುವಾದದ 17ಪುಸ್ತಕಗಳು, 18 ಸಂಪಾದಿತ ಗ್ರಂಥಗಳು, ಇಂಗ್ಲಿಷ್ ನಲ್ಲಿ ಸಹಸಂಪಾದನೆಯ 6 ಕೃತಿಗಳು, ತುಳು ಭಾಷೆಯಲ್ಲಿ ಎರಡು ಪುಸ್ತಕಗಳು ಪ್ರಕಟಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News