ವಿವಿಗಳು ಅರ್ಥಪೂರ್ಣ ಚರ್ಚೆಯ ಕೇಂದ್ರವಾಗಬೇಕು: ಮುಖರ್ಜಿ
ಕೊಚ್ಚಿ, ಮಾ.2: ವಿಶ್ವವಿದ್ಯಾನಿಲಯದ ಆವರಣದಲ್ಲಿ ಮುಕ್ತ ಚಿಂತನೆಗೆ ಆಸ್ಪದ ಇರಬೇಕು . ಅಶಾಂತಿಯ ಸಂಸ್ಕೃತಿಯನ್ನು ಪ್ರಸಾರ ಮಾಡುವ ಬದಲು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಅರ್ಥಯುಕ್ತವಾದ ಚರ್ಚೆಯಲ್ಲಿ ತೊಡಗಿಕೊಳ್ಳಬೇಕು ಎಂದು ರಾಷ್ಟಪ್ರತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ದಿಲ್ಲಿ ವಿವಿಯಲ್ಲಿ ಎಬಿವಿಪಿ ಮತ್ತು ಎಐಎಸ್‌ಎ ಬೆಂಬಲಿತ ವಿದ್ಯಾರ್ಥಿಗಳ ನಡುವಿನ ಸಂಘರ್ಷ ಮತ್ತು ದಿಲ್ಲಿ ವಿವಿ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ವೀಟ್ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಮ್ಮ ಕಳವಳ ವ್ಯಕ್ತಪಡಿಸಿದರು.
ನಮ್ಮ ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆಗಳು ದೇಶವನ್ನು ಜ್ಞಾನದ ದಿಕ್ಕಿನೆಡೆಗೆ ಸಾಗಿಸಿದ್ದವು. ಶಿಕ್ಷಣದ ದೇವಾಲಯಗಳಾಗಿರು ಈ ಸಂಸ್ಥೆಗಳಲ್ಲಿ ಮುಕ್ತ ಚಿಂತನೆಗೆ, ಚಿಂತನೆಯ ಅಭಿವ್ಯಕ್ತಿಗೆ ಮತ್ತೆ ಅವಕಾಶ ದೊರಕಬೇಕಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಹಿಂಸಾತ್ಮಕ ಘಟನೆಗಳಲ್ಲಿ ತೊಡಗಿ ಬಂಧನಕ್ಕೆ ಒಳಗಾಗುವುದು ದುರಂತವಾಗಿದೆ ಎಂದರು. ಪುರಾತನ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿ ಮುಕ್ತ ಯೋಚನೆಗೆ, ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿದೆ. ಈ ದೇಶದಲ್ಲಿ ‘ಅಸಹಿಷ್ಣು ಭಾರತೀಯನಿಗೆ’ ಜಾಗವಿಲ್ಲ ಎಂದವರು ಹೇಳಿದರು.
ನ್ಯಾಯಸಮ್ಮತವಾಗಿ ಟೀಕಿಸಲು ಮತ್ತು ವಿರೋಧ ವ್ಯಕ್ತಪಡಿಸಲು ಆಸ್ಪದ ನೀಡಬೇಕು. ಮಹಿಳೆ ಮತ್ತು ಮಕ್ಕಳ ರಕ್ಷಣೆ ರಾಷ್ಟ್ರೀಯ ಆದ್ಯತೆಯ ವಿಷಯವಾಗಬೇಕು. ಯಾವುದೇ ಒಂದು ಸಮಾಜ ಮಹಿಳೆ ಮತ್ತು ಮಕ್ಕಳ ವಿಷಯದಲ್ಲಿ ತೋರುತ್ತಿರುವ ವರ್ತನೆಯ ಆಧಾರದಲ್ಲಿ ಆ ಸಮಾಜದ ಯೋಗ್ಯತೆಯನ್ನು ಅಳೆಯಲಾಗುತ್ತದೆ. ಭಾರತ ಮಹಿಳೆ, ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಮಾದರಿಯಾಗಬೇಕು ಎಂದವರು ನುಡಿದರು. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಸಂವಿಧಾನದಲ್ಲಿ ಮಾತ್ರ ನೀಡಿಲ್ಲ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಮಹಿಳೆಗೆ ಪೂಜನೀಯ ಸ್ಥಾನ ನೀಡಿದ್ದವು ಎಂದು ಅವರು ಹೇಳಿದರು.