ಕಣ್ಣೂರು ವಿವಿ ಎಂ.ಎ. ಕನ್ನಡ ಫಲಿತಾಂಶ ಪ್ರಕಟ

Update: 2017-03-02 18:29 GMT

ಕಣ್ಣೂರು, ಮಾ.2: ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಫಲಿತಾಂಶ ಪ್ರಕಟವಾಗಿದ್ದು, ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ ಹೊಳ್ಳ ಎನ್. ಪ್ರಥಮಸ್ಥಾನ ಪಡೆದರೆ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಕ್ರಮವಾಗಿ ಸುಜಿತ್ ಕುಮಾರ್ ಮತ್ತು ಸುಮಾ ಎನ್. ಪಡೆದುಕೊಂಡಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ಸ್ನೇಹರಂಗ ಮತ್ತು ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಗಿಳಿವಿಂಡು ವೇದಿಕೆಯ ಅಧ್ಯಕ್ಷರಾಗಿ ದುಡಿದಿರುವ ಪ್ರಶಾಂತ ಹೊಳ್ಳ, ಸಿರಿಬಾಗಿಲು ಸಮೀಪದ ನೀರಾಳ ಸುಬ್ರಾಯ ಹೊಳ್ಳ ಮತ್ತು ಸುಕಾಂತಿ ದಂಪತಿ ದ್ವಿತೀಯ ಪುತ್ರ.

ಕಣ್ಣೂರು ವಿವಿ ಮಟ್ಟದ ಯಕ್ಷಗಾನ ಸ್ಪರ್ಧೆಗಳಲ್ಲಿ ಹಲವು ಬಹುಮಾನ ಪಡೆದಿರುವ ಇವರು ಕಾಸರಗೋಡು ಸರಕಾರಿ ಯು.ಪಿ. ಶಾಲೆ, ಕಾಸರಗೋಡು ಬಿ.ಇ.ಎಂ. ಹಿರಿಯ ಪ್ರೌಢ ಶಾಲೆ, ಮೊಗ್ರಾಲ್ ಪುತ್ತೂರು ಸರಕಾರಿ ಹಿರಿಯ ಪ್ರೌಢಶಾಲೆ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಹಾಗೂ ಚಾಲಾದ ಕಣ್ಣೂರು ವಿವಿ ಅಧ್ಯಾಪಕ ತರಬೇತಿ ಕೇಂದ್ರದ ಹಳೆ ವಿದ್ಯಾರ್ಥಿ. ಕಾಸರಗೋಡಿನ ಕನ್ನಡ ಚಟುವಟಿಕೆಗಳಲ್ಲಿ ಸಕ್ರೀಯರಾಗಿರುವ ಇವರು ಕನ್ನಡ ಸಮನ್ವಯ ಸಮಿತಿ ಯುವ ಬಳಗದ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಬೇಕಲ ಫಿಶರಿಸ್ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 


ಸುಜಿತ್ ಕುಮಾರ್ ಅವರು ಉಪ್ಪಳ ಸಮೀಪದ ಸುಭಾಷ್‌ನಗರದ ದಿ.ಮೋನಪ್ಪ ಹಾಗೂ ಗೀತಾ ದಂಪತಿ ಪುತ್ರ. ಇವರ ಲೇಖನಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಭೂತಾರಾಧನೆ, ಪಾಡ್ದನ, ಜನಪದ ಕುಣಿತ, ಜನಪದ ಗಾಯನ ಈ ಮುಂತಾದ ಜನಪದ ವಿಷಯ ವಿಚಾರಗಳಲ್ಲಿ ವಿಶೇಷ ಆಸಕ್ತಿಯಿರುವ ಇವರು ಬೇಕೂರು ಹಿರಿಯ ಪ್ರೌಢಶಾಲೆ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಹಾಗೂ ಚಾಲಾದ ಕಣ್ಣೂರು ವಿ ವಿ ಅಧ್ಯಾಪಕ ತರಬೇತಿ ಕೇಂದ್ರದ ಹಳೆ ವಿದ್ಯಾರ್ಥಿ. ಕನ್ನಡ ಸಮನ್ವಯ ಸಮಿತಿ ಯುವ ಬಳಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದು, ಪ್ರಸ್ತುತ ಸರ್ವೋದಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


 ಸುಮಾ ಎನ್. ನೆಕ್ರಾಜೆಯ ದಿ. ನಾರಾಯಣ ರೈ ಹಾಗೂ ಪುಷ್ಪಲತಾ ದಂಪತಿ ಪುತ್ರಿ. ಕಾಲೇಜಿನ ಕನ್ನಡ ಧ್ವನಿ ಪತ್ರಿಕೆಯ ಸಂಪಾದಕಿಯಾಗಿದ್ದರು. ಪೆರಡಾಲ ನವಜೀವನ ಪ್ರೌಢ ಶಾಲೆ, ಸ್ವಾಮೀಜೀಸ್ ಹಿರಿಯ ಪ್ರೌಢ ಶಾಲೆ ಎಡನೀರು, ಕಾಸರಗೋಡು ಸರಕಾರಿ ಕಾಲೇಜುಗಳ ಹಳೆವಿದ್ಯಾರ್ಥಿ. ಪ್ರಸ್ತುತ ಚಾಲಾದಲ್ಲಿರುವ ಕಣ್ಣೂರು ವಿಶ್ವವಿದ್ಯಾನಿಲಯದ ಅಧ್ಯಾಪಕ ತರಬೇತಿ ಕೇಂದ್ರದಲ್ಲಿ ಬಿ.ಎಡ್ ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News