ಮೆಕ್ಸಿಕನ್ ಓಪನ್: ನಡಾಲ್ ಫೈನಲ್‌ಗೆ
ಅಕುಪುಲ್ಕೊ, ಮಾ.4: ಕ್ರೊಯೇಷಿಯದ ಮರಿನ್ ಸಿಲಿಕ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ಸ್ಟಾರ್ ಆಟಗಾರ ರಫೆಲ್ ನಡಾಲ್ ಮೆಕ್ಸಿಕನ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ 30ರ ಹರೆಯದ ನಡಾಲ್ ಅವರು ಸಿಲಿಕ್‌ರನ್ನು 6-1, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಈ ವರ್ಷದ ಮೊದಲ ಪ್ರಶಸ್ತಿ ಹಾಗೂ ಒಟ್ಟಾರೆ 70ನೆ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ನಡಾಲ್ ಮೆಕ್ಸಿಕನ್ ಓಪನ್‌ನಲ್ಲಿ ಸತತ 14ನೆ ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ. ನಡಾಲ್ 2005 ಹಾಗೂ 2013ರಲ್ಲಿ ಮೆಕ್ಸಿಕೊ ಓಪನ್‌ನಲ್ಲಿ ಜಯ ಸಾಧಿಸಿದ್ದರು.
ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತ ಬಳಿಕ ಮೊದಲ ಟೂರ್ನಮೆಂಟ್‌ನಲ್ಲಿ ಆಡಿರುವ ನಡಾಲ್ ಪ್ರಶಸ್ತಿ ಸುತ್ತಿನಲ್ಲಿ ಅಮೆರಿಕದ ಸ್ಯಾಮ್ ಕ್ಯೂರ್ರಿ ಅಥವಾ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು ಎದುರಿಸಲಿದ್ದಾರೆ. ನಡಾಲ್ 2014ರಲ್ಲಿ ದೋಹಾದಲ್ಲಿ ಕೊನೆಯ ಬಾರಿ ಹಾರ್ಡ್‌ಕೋರ್ಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.