ಪ್ರತಿ ವಾರ್ಡ್‌ಗಳಲ್ಲಿ ಜನಸಂಪರ್ಕ ಸಭೆ: ಶಾಸಕ ಜೆ.ಆರ್. ಲೋಬೋ
ಮಂಗಳೂರು, ಮಾ.4: ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ಗಳಲ್ಲಿಯೂ ಜನಸಂಪರ್ಕ ಸಭೆಗಳನ್ನು ಸಾರ್ವಜನಿಕರಿಗೆ ಅನುಕೂಲಕರ ಸಮಯದಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜೆ.ಆರ್. ಲೋಬೋ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ಇಂದು ಮಂಗಳೂರು ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಬಿಡುಗಡೆಯಾದ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಸ್ಥಳೀಯ ವಾರ್ಡ್‌ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ರಾಷ್ಟ್ರೀಯ ಕುಟುಂಬ ಯೋಜನೆಯಡಿ ತಲಾ 20 ಸಾವಿರ ರೂ.ನಂತೆ 4.60 ಲಕ್ಷ ರೂ. ಮೊತ್ತದ ಸಹಾಯಧನ, ಅಂತ್ಯಸಂಸ್ಕಾರ ಯೋಜನೆಯಡಿ ತಲಾ 10 ಸಾವಿರ ರೂ.ನಂತೆ ಇಬ್ಬರಿಗೆ, ಮೀನುಗಾರಿಕಾ ಇಲಾಖೆಯಿಂದ ಸಂಕಷ್ಟ ಪರಿಹಾರ ನಿಧಿಯಡಿ ತಲಾ 1 ಲಕ್ಷ ರೂ. ಹಾಗೂ ತಲಾ 2 ಲಕ್ಷ ರೂ.ನಂತೆ ಇಬ್ಬರು ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು. ಇದೇ ವೇಳೆ 45 ಮಂದಿಗೆ ವಿವಿಧ ರೀತಿಯ ಪಿಂಚಣಿ ಹಸ್ತಾಂತರಿಸಲಾಯಿತು.
ಸಾರ್ವಜನಿಕರಿಂದ ಕುಂದುಕೊರತೆಗಳ ಕುರಿತಂತೆ ಅಹವಾಲು ಅರ್ಜಿಯನ್ನು ಶಾಸಕ ಜೆ.ಆರ್. ಲೋಬೋ ಈ ಸಂದರ್ಭ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹದೇವಯ್ಯ, ಹೆಚ್ಚುವರಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಎಸಿಪಿ ಉದಯ ನಾಯಕ್, ಮನಪಾ ಸದಸ್ಯರಾದ ಅಬ್ದುಲ್ ಲತೀಫ್, ಸಬಿತಾ ಮಿಸ್ಕಿತ್, ಕೇಶವ, ಅಖಿಲಾ ಆಳ್ವ ಹಾಗೂ ಇತರ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.