ಕಿವೀಸ್ ವಿರುದ್ಧ ಏಕದಿನ ಸರಣಿ ಗೆದ್ದುಕೊಂಡ ದಕ್ಷಿಣ ಆಫ್ರಿಕ
ಆಕ್ಲೆಂಡ್, ಮಾ.4: ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದ ದಕ್ಷಿಣ ಆಫ್ರಿಕ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.
ಉಭಯ ತಂಡಗಳು ತಲಾ 2 ಪಂದ್ಯ ಜಯಿಸಿದ ಕಾರಣ ಸರಣಿ 2-2 ರಿಂದ ಸಮಬಲಗೊಂಡಿತ್ತು. ಎರಡೂ ತಂಡಗಳಿಗೆ 5ನೆ ಪಂದ್ಯ ನಿರ್ಣಾಯಕವಾಗಿತ್ತು.
ಶನಿವಾರ ಇಲ್ಲಿ ನಡೆದ 5ನೆ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ತಂಡ ನ್ಯೂಝಿಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ವೇಗದ ಬೌಲರ್ ಕಾಗಿಸೊ ರಬಾಡ(3-25), ಸ್ಪಿನ್ನರ್ ಇಮ್ರಾನ್ ತಾಹಿರ್(2-14) ಹಾಗೂ ಫೆಲುಕ್ವಾಯೊ(2-35) ದಾಳಿಗೆ ತತ್ತರಿಸಿ ಕಿವೀಸ್ ತಂಡ 41.1 ಓವರ್‌ಗಳಲ್ಲಿ 149 ರನ್‌ಗೆ ಆಲೌಟಾಯಿತು. ಆತಿಥೇಯರ ಪರ ಗ್ರಾಂಡ್‌ಹೊಮ್(32) ಅಗ್ರ ಸ್ಕೋರರ್ ಎನಿಸಿಕೊಂಡರು. 4ನೆ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್(4) ರಬಾಡ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡಾದರು.
ಗೆಲುವಿಗೆ ಸುಲಭ ಸವಾಲು ಪಡೆದ ದಕ್ಷಿಣ ಆಫ್ರಿಕ ತಂಡ 32.2 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿತು. ಎಫ್‌ಡು ಪ್ಲೆಸಿಸ್(ಅಜೇಯ 51, 90 ಎಸೆತ, 6 ಬೌಂಡರಿ) ಹಾಗೂ ಡೇವಿಡ್ ಮಿಲ್ಲರ್(ಅಜೇಯ 45, 35 ಎಸೆತ, 6 ಬೌಂಡರಿ, 2 ಸಿಕ್ಸರ್)5ನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿ ಇನ್ನೂ 106 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.