×
Ad

ಆರೆಸ್ಸೆಸ್ ನಾಯಕರೊಂದಿಗೆ ಗೆಳತನವಿದೆ : ದಿಗ್ವಿಜಯ್ ಸಿಂಗ್

Update: 2017-03-04 15:11 IST

ಭೋಪಾಲ್,ಮಾ.4: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೆಸ್ಸೆಸ್‌ನೊಂದಿಗೆ ತನಗಿರುವ ಸಂಬಂಧವನ್ನು ಒಪ್ಪಿಕೊಂಡಿದ್ದಾರೆಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ. ಶುಕ್ರವಾರ ಈ ಕುರಿತು ಮಾತಾಡಿದ ಅವರು ಆರೆಸ್ಸೆಸ್‌ನ ಒಳ್ಳೆಯ ನಾಯಕರೊಂದಿಗೆ ತನಗೆ ಗೆಳೆತನವಿದೆ. ಹಿಂಸೆ ಮಾಡುವವರೊಂದಿಗೆ, ಸುಳ್ಳು ಹೇಳುವವರೊಂದಿಗೆ ತನಗೆ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ.

ಆರೆಸ್ಸೆಸ್‌ನಲ್ಲಿ ಹಿಂಸೆಯನ್ನೇ ಕಲಿಸಲಾಗುತ್ತದೆ. ಉತ್ತಮ ಆರೆಸ್ಸೆಸ್ ವ್ಯಕ್ತಿ ಗೋವಿಂದಾಚಾರ್ಯ ನನ್ನ ಗೆಳೆಯರು. ಆದರೆ ಹಿಂಸೆ ಮಾಡುವ ಮತ್ತು ಸುಳ್ಳು ಹೇಳುವವರನ್ನು ನಾನು ವಿರೋಧಿಸುತ್ತೇನೆ. ಇದೇ ವೇಳೆ ಅವರು ಮಧ್ಯಪ್ರದೇಶದ ಬಿಜೆಪಿ ಕಾರ್ಯಕರ್ತರು ಐಎಸ್‌ಐ ಬೇಹುಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ಟೀಕಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶದಲ್ಲಿ ಐಎಸ್‌ಐ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರು, ಒಬ್ಬನೇ ಒಬ್ಬಮುಸ್ಲಿಂ ವ್ಯಕ್ತಿ ಇದರಲ್ಲಿಲ್ಲ. ಒಂದುವೇಳೆ ಮುಸ್ಲಿಮರಲ್ಲಿ ಯಾರಾದರೂಇದ್ದಿದ್ದರೆ ಮಾಧ್ಯಮಗಳು ಕೋಲಾಹಲ ಸೃಷ್ಟಿಸುತ್ತಿದ್ದವು ಎಂದು ಹೇಳಿದರು.

ಕೈಲಾಶ್ ವಿಜಯ್‌ವರ್ಗೀಯರೊಡನೆ ಬಂಗಾಳದಲ್ಲಿ ಮಕ್ಕಳ ಮಾರಾಟದ ಬಗ್ಗೆ ನೀವೇನು ಹೇಳುತ್ತೀರಿ ಎಂದು ನಾನು ಕೇಳುವೆ. ಕೈಲಾಶ್ ಎಲ್ಲಿಗೆ ಹೋದರೂ ಅಲ್ಲಿ ತಮಗೆ ಜಾಗ ಮಾಡಿಕೊಳ್ಳುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ. ಕೇರಳದ ಮುಖ್ಯಮಂತ್ರಿಯ ಕೊರಳು ಕೊಯ್ಯುವ ಬೆದರಿಕೆ ಹಾಕಿದ ಆರೆಸ್ಸೆಸ್ ಪ್ರಚಾರ್ ಪ್ರಮುಖ್‌ನನ್ನು ಈವರೆಗೆ ಯಾಕೆಬಂಧಿಸಲಾಗಿಲ್ಲ. ಅವರಿಗೆ ಆರೆಸ್ಸೆಸ್ ಮತ್ತು ಬಿಜೆಪಿ ರಕ್ಷಣೆ ನೀಡಿರಬೇಕು ಎಂದು ದಿಗ್ವಿಜಯ್ ಸಿಂಗ್ ಹೇಳಿದರು.

ಜಿಡಿಪಿಯಲ್ಲಿ ಕೂಡಾ ಕೈಚಳಕ ತೋರಿಸಲಾಗಿದೆ, ಉದ್ಯೋಗಾವಕಾಶ ನಾಶವಾಗಿದೆ. ಕೆಲಸ, ವ್ಯಹಾರಗಳು ಸ್ತಬ್ಧವಾಗಿವೆ. ಹೀಗಿರುವಾಗ ಜಿಡಿಪಿ ಹೆಚ್ಚಳವಾಗಲು ಹೇಗೆ ಸಾಧ್ಯ? ಇದು ಎಲ್ಲ ವಿಷಯದಲ್ಲಿಯೂ ಫೈಲು,ಆದರೆ ಫಲಿತಾಂಶ ಮಾತ್ರ ಶೇ.90ರಷ್ಟಿದೆ ಎನ್ನುವಂತಾಗಿದೆ ಎಂದು ಅವರು ಕೇಂದ್ರಸರಕಾರವನ್ನು ಟೀಕಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News