×
Ad

​ಪಕ್ಷಾಂತರದ ದುರಾಸೆ ಇಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ

Update: 2017-03-04 17:36 IST

ಮಂಗಳೂರು, ಮಾ.4: ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಂದ ತನಗೆ ಆಹ್ವಾನ ಬಂದಿರುವುದು ನಿಜ. ಕಾಂಗ್ರೆಸ್ ಮುಂಖಂಡರಿಗಿಂತ ಅಧಿಕ ಬಿಜೆಪಿ ಮುಖಂಡರು ಈ ಬಗ್ಗೆ ತನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಪಕ್ಷಾಂತರ ಮಾಡಿಕೊಳ್ಳುವಷ್ಟು ದುರಾಸೆ ತನಗೆ ಇಲ್ಲ ಎಂದು ಶಾಸಕ ಹಾಗೂ ಜೆಡಿಎಸ್‌ನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದ ಅವರು, ಜನರಿಂದ ತಿರಸ್ಕೃತರಾದವರು, ತುಕ್ಕು ಹಿಡಿದವರು ಇತರ ಪಕ್ಷಗಳಿಗೆ ವಲಸೆ ಹೋಗಲು ಶುರುಮಾಡಿದ್ದಾರೆ ಎಂದು ಹೇಳಿದರು.

ಬರಗಾಲದ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರು ಸಹಕಾರ ಬ್ಯಾಂಕುಗಳಿಂದ ಪಡೆದ ಬೆಳೆ ಸಾಲದ ಶೇ. 50 ಕೇಂದ್ರ ಮನ್ನಾ ಮಾಡಲು ರಾಜ್ಯ ಕಾಯುವುದು ಬೇಡ. ಶೇ.50 ಸಾಲದ ಮೊತ್ತವನ್ನು ರಾಜ್ಯ ಸರ್ಕಾರ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ರಾಜ್ಯದಲ್ಲಿ ಮತ್ತೆ ಜನತೆ ಅವಕಾಶ ಒದಗಿಸುತ್ತಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ ಮಧು ಬಂಗಾರಪ್ಪ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈಗ ಸ್ವಲ್ಪ ಕಡಿಮೆ ಶಕ್ತಿ ಇರಬಹುದು. ಆದರೆ ಉತ್ತರ ಕನ್ನಡ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಬಲವರ್ಧಿಸಿಕೊಂಡಿದೆ ಎಂದರು.

ಬಿಎಸ್‌ವೈಗೇನಿದೆ ಅರ್ಹತೆ?

ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವ ಅರ್ಹತೆ ಬಿ.ಎಸ್. ಯಡಿಯೂರಪ್ಪರಿಗೇನಿದೆ? ಕೆಲ ಪ್ರಕರಣಗಳಲ್ಲಿ ಅವರಿಗೆ ತಾಂತ್ರಿಕವಾಗಿ ಜಯ ದೊರೆತಿರಬಹುದು. ಆದರೆ ಇನ್ನೂ 7- 8 ಕೇಸುಗಳು ಇನ್ನೂ ನಡೆಯುತ್ತಿವೆ ಎಂದು ಹೇಳಿದರು.

ಸ್ಟೀಲ್ ಬ್ರಿಡ್ಜ್ ರದ್ದು ಮಾಡಿ ಕಾಂಗ್ರೆಸ್ ಹೇಡಿತನ ಪ್ರದರ್ಶಿಸಿದೆ ಎಂದವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಮಾಜಿ ಸಚಿವ ಮಹಮ್ಮದ್ ಕುಂಞಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಹಮ್ಮದ್‌ಕುಂಞಿ, ಹೈದರ್ ಪರ್ತಿಪಾಡಿ, ಅಮರ್‌ನಾಥ ಶೆಟ್ಟಿ, ಕಾರ್ಪೋರೇಟರ್ ರಮೀಜಾ, ರಾಮ್ ಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News