ಅಕ್ಬರ್ ಕೋಟೆಯ ಮರುನಾಮಕರಣ: ರಾಜಸ್ಥಾನ ಸಚಿವರಿಗೆ ಬೆದರಿಕೆ ಪತ್ರ
ಜೈಪುರ,ಮಾ.4: ಅಜ್ಮೇರ್‌ನ ಅಕ್ಬರ್ ಕೋಟೆಯ ಮರುನಾಮಕರಣಕ್ಕೆ ಸಂಬಂಧಿಸಿ ದಂತೆ ರಾಜಸ್ಥಾನದ ಶಿಕ್ಷಣ ಸಚಿವ ಹಾಗೂ ಅಜ್ಮೇರ್(ಉತ್ತರ) ಶಾಸಕ ವಾಸುದೇವ ದೇವ್ನಾನಿ ಅವರಿಗೆ ಬೆದರಿಕೆ ಪತ್ರವೊಂದು ಬಂದಿದೆ.
ರಾಜಸ್ಥಾನ ಸರಕಾರವು ಕೆಲವು ಸಮಯದ ಹಿಂದೆ ಅಜ್ಮೇರ್‌ನ ಅಕ್ಬರ್ ಕೋಟೆಯ ನ್ನು ಅಜ್ಮೇರ್ ಮ್ಯೂಝಿಯಂ ಎಂದು ಮರುನಾಮಕರಣಗೊಳಿಸಿತ್ತು.
ತನ್ನನ್ನು ತರನ್ನುಮ್ ಚಿಸ್ತಿ ಎಂದು ಹೇಳಿಕೊಂಡಿರುವ ವ್ಯಕ್ತಿಯು ಬರೆದಿರುವ ಈ ಪತ್ರವು ಡಿ.12ರಂದು ದೇವ್ನಾನಿಯವರಿಗೆ ತಲುಪಿದ್ದು ಫೆ.21ರಂದು ದೂರು ಸಲ್ಲಿಸಿದ್ದಾರೆ. ಪತ್ರದಲ್ಲಿ ಕೋಟೆಯ ಹೆಸರನ್ನು ಬದಲಿಸಿದ್ದಕ್ಕೆ ಸಚಿವರ ವಿರುದ್ಧ ‘ಕಠಿಣ ಕ್ರಮವನ್ನು ’ ತೆಗೆದುಕೊಳ್ಳಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ ಎಂದು ಅಜ್ಮೇರ್ ಕೋತವಾಲಿ ಠಾಣಾಧಿಕಾರಿ ಬಿ.ಎಲ್.ಮೀನಾ ತಿಳಿಸಿದರು. ಪತ್ರ ಕಳುಹಿಸಿರುವ ವ್ಯಕ್ತಿಯ ಪತ್ತೆಗಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಅಜ್ಮೇರ್‌ನ ನಯಾಬಝಾರ್‌ನಲ್ಲಿರುವ ಕೋಟೆಯನ್ನು ಮುಘಲ್ ಚಕ್ರವರ್ತಿ ಅಕ್ಬರ್ 1570ರಲ್ಲಿ ನಿರ್ಮಿಸಿದ್ದ. ಒಂದು ಕಾಲದಲ್ಲಿ ಅಕ್ಬರ್‌ನ ಪುತ್ರ ಸಲೀಂ ನಿವಾಸವಾಗಿದ್ದ ಈ ಕೋಟೆಯೀಗ ಮುಘಲ್ ಮತ್ತು ರಜಪೂತರ ಶಸ್ತ್ರಾಸ್ತ್ರಗಳು ಮತ್ತು ಶಿಲ್ಪಕೃತಿಗಳ ಸಂಗ್ರಹಾಲಯವಾಗಿದೆ.
ಈ ಕೋಟೆಯ ಮೂಲಕ ಭಾರತದೊಂದಿಗೆ ವ್ಯಾಪಾರ ಮಾಡಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಅನುಮತಿ ನೀಡಿ ದೊರೆ ಜಹಾಂಗೀರ್ ಫರ್ಮಾನು ಹೊರಡಿಸಿದ್ದ.
ದೇವ್ನಾನಿಯವರಿಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಜಸ್ಥಾನದ ಗೃಹಸಚಿವ ಗುಲಾಬಚಂದ್ ಕಟಾರಿಯಾ ತಿಳಿಸಿದ್ದಾರೆ.