×
Ad

ನಿರಂತರ ಅಧ್ಯಯನಶೀಲತೆಯಿಂದ ಪಕ್ವ ಸಾಹಿತ್ಯ: ಲಕ್ಷ್ಮೀಶ ಚೊಕ್ಕಾಡಿ

Update: 2017-03-04 17:57 IST

ಸುಳ್ಯ, ಮಾ.4: ನಿರಂತರ ಅಧ್ಯಯನ ಶೀಲತೆಯಿಂದ ಮನಸ್ಸು ಪಕ್ವಗೊಳ್ಳುತ್ತದೆ. ಆತ್ಮವಿಮರ್ಶೆ, ಆತ್ಮಸಾಕ್ಷಿ, ಇಚ್ಚಾಶಕ್ತಿಗಳು ಒಗ್ಗೂಡಿದರೆ ಪಕ್ವ ಸಾಹಿತ್ಯ ರಚನೆಗೊಳ್ಳುತ್ತದೆ ಎಂದು ಖ್ಯಾತ ಸಾಹಿತಿ ಲಕ್ಷ್ಮೀಶ ಚೊಕ್ಕಾಡಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಸುಳ್ಯದ ಚೇತನ್‌ರಾಮ್ ಇರಂತಕಜೆ ಸಭಾಂಗಣದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಶನಿವಾರ ನಡೆದ ಸುಳ್ಯ ತಾಲೂಕು 21ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮಗೆ ಬದುಕು ಮುಖ್ಯ. ನಾವು ಆರ್ಥಿಕವಾಗಿ ಸುಧಾರಣೆಗೊಳ್ಳಬೇಕು. ಆದರೆ ಆರ್ಥಿಕತೆಯೇ ಮದ್ದಲ್ಲ. ಈ ಜಗತ್ತಿನಲ್ಲಿ ನೊಂದವರಿದ್ದಾರೆ, ನೋಯಿಸಿದವರಿದ್ದಾರೆ, ನಿರಂತರ ನೋಯಿಸುತ್ತ ಆತ್ಮರತಿಯಲ್ಲಿ ತೇಲಾಡುವವರಿದ್ದಾರೆ, ಹಾಗೆಯೇ ನೊಂದವರಂತೆ ನಟಿಸುತ್ತ ಅಜ್ಞರ ಅನುಕಂಪ ಪಡೆವವರಿದ್ದಾರೆ. ಇದೆಲ್ಲವೂ ಸಾಹಿತ್ಯದಲ್ಲಿ ದಾಖಲಾಗುತ್ತದೆ. ವರ್ತುಲದ ಒಳಗಿದ್ದಾಗಲೇ ದಿವ್ಯ ದರ್ಶನ- ವರ್ತುಲದ ಹೊರಗೆ ವಿಕಾಸದ ನಿಜಬಣ್ಣ ಅರಿವು ಹೃದ್ಗತ. ಹಂಗಿನರಮನೆಯ ಹೊರಗೆ ಬರಬೇಕು ಎಂದು ಹೇಳಿದ ಅವರು, ಮಾಧ್ಯಮಗಳಿಗೂ ಒಂದು ಮಾರ್ಜಿನ್ ಗೆರೆ ಅಗತ್ಯ ಎಂದರು.

ಕಂಬಳ ನಿಷೇಧ ತಪ್ಪು:

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪ್ರಾಚೀನ, ಸುಪ್ರಸಿದ್ದವಾದ, ಅಹಿಂಸಾತ್ಮಕ, ಶ್ರಮ ಜೀವಿಗಳ ಸಂಭ್ರಮದ ಕ್ರೀಡೆಯಾದ ಕಂಬಳವನ್ನು ನಿಷೇಧಿಸಿದ್ದು ಬಹಳ ದೊಡ್ಡ ತಪ್ಪು. ಕೋಣಗಳ ಬದಲು ಮನುಷ್ಯನನ್ನು ಓಡಿಸಿದರೆ ಹೇಗೆ ಎಂಬ ಪ್ರಶ್ನೆ ಬಂತು. ಕೋಣ ಓಡಿಸುವವನ ವೇಗವೂ ಉಸೇನ್ ಬೋಲ್ಟ್‌ಗೇನೂ ಕಮ್ಮಿಯಿಲ್ಲ. ಜಯ-ವಿಜಯ, ಲವ-ಕುಶ, ಕೋಟಿ-ಚೆನ್ನಯ, ಕಾಂತಾಬಾರೆ-ಬುದಾಬಾರೆ- ಮುಂತಾದ ಜೋಡುಕೆರೆ ಕಂಬಳಗಳ ಗಮ್ಮತ್ತು ಸ್ಪೇನ್ ನ ಗೂಳಿ ಕಾಳಗದಷ್ಟು ಅಸಹ್ಯಕರವಾದುದಲ್ಲ. ನಮ್ಮ ಜಿಲ್ಲೆಯವರು ಸಹನಾಶೀಲರಾದ ಕಾರಣವೇ ಈ ನಿಷೇಧ.

ತಮಿಳುನಾಡಿನ ಜಲ್ಲಿಕಟ್ಟು, ಹೋರಿ ಕೆಂಡ ಹಾಯುವುದು, ಹೋರಿ ಬೆದರಿಸಿ ಓಡಿಸುವುದು, ಹೋರಿಯ ಕೊಂಬು ಜಗ್ಗುವುದು - ಇದೆಲ್ಲ ನಿಷೇಧವಾದಾಗ ಎಷ್ಟೆಲ್ಲಾ ಹಿಂಸಾಚಾರವಾಯಿತು. ಈಗ ಕಂಬಳದ ವಿಷಯವನ್ನು ತೆಗೆದು ಹಾಕುವ ಮಾತನಾಡುತ್ತಿದ್ದಾರೆ. ಯೋಚಿಸಿ ಕೆಲಸ ಮಾಡುವ ಭಾವ ಮೊದಲೇ ಇದ್ದಿದ್ದರೆ ಗೊಂದಲವಿರುತ್ತಿರಲಿಲ್ಲ. ಎತ್ತಿನಹೊಳೆ ಯೋಜನೆಯೂ ಹೀಗೆ ಗೊಂದಲಕ್ಕೊಳಗಾಗಿದೆ ಎಂದು ಲಕ್ಷ್ಮೀಶ ಚೊಕ್ಕಾಡಿ ಹೇಳಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ, ಕನ್ನಡ ನಮ್ಮ ಉಸಿರಿನ ಭಾಷೆಯಾಗಬೇಕು ಎಂದು ಹೇಳಿದರು.
ನೂತನ ಕೃತಿಗಳನ್ನು ಅನಾವರಣಗೊಳಿಸಿದ ಲೇಖಕ ರಾಧಾಕೃಷ್ಣ ಕಲ್ಚಾರ್ ಮಾತನಾಡಿ, ಆಧುನಿಕ ತಂತ್ರಜ್ಞಾನಗಳು ನಮ್ಮೆಲ್ಲ ಭಾವನೆಗಳನ್ನು ಬೇರೆ ಬೇರೆ ರೂಪದಲ್ಲಿ ಪ್ರಕಟಗೊಳಿಸುತ್ತಿದ್ದು ಈ ಕುರಿತು ಮಾಹಿತಿ ಮತ್ತು ಎಚ್ಚರಿಕೆ ಅಗತ್ಯ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ಅಂಕಣಕಾರ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ, ಸಮಾಜಘಾತುಕ ಶಕ್ತಿಗಳ ವಿರುದ್ಧ ಪ್ರತಿಭಟಿಸಿದ ಸಾಹಿತಿಗಳು ಇದ್ದೂ ಪ್ರಯೋಜನವಿಲ್ಲ ಸಮಾಜಘಾತುಕ ಶಕ್ತಿಗಳ ವಿರುದ್ಧ ತಮ್ಮ ಬರಹದಲ್ಲಿ ಪ್ರತಿಭಟನೆ ತೋರದ ಸಾಹಿತಿಗಳು ಇದ್ದೂ ಪ್ರಯೋಜನವಿಲ್ಲ. ಸಮಾಜವಿರೋಧಿ ಚಟುವಟಿಕೆಗಳನ್ನು ಖಂಡಿಸದಿದ್ದರೆ ಭವಿಷ್ಯದಲ್ಲಿ ಏನೂ ಉಳಿಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ ಭ್ರಮಾಧೀನ ಭಾವನೆಗಿಂತ ವಾಸ್ತವದ ನೆಲೆಗೆಟ್ಟಿನಲ್ಲಿ ಆಲೋಚಿಸುವುದು ಮುಖ್ಯ ಎಂದು ಹೇಳಿದರು.

 ಎಪಿಯಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ನುಡಿಗಳನ್ನಾಡಿದರು.
ಶಾಸಕ ಎಸ್ . ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಲಸುಬ್ರಹಣ್ಯ ಕಂಜರ್ಪಣೆ ವೇದಿಕೆಯಲ್ಲಿದ್ದರು.

ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯೆಕ್ಷೆ ಶ್ರೀಮತಿ ಮೀನಾಕ್ಷಿ ಗೌಡ ಸ್ವಾಗತಿಸಿದರು. ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ ಪ್ರಸ್ತಾವನೆಗೈದರು. ಸ್ಮರಣ ಸಂಚಿಕೆ ಸಂಪಾದಕ ವಾಸುದೇವ ನಡ್ಕ ಮಾತನಾಡಿದರು. ಮಮತಾ ಮೂಡಿತ್ತಾಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ವಂದಿಸಿದರು. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ ಹೇಮನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಡಾ. ಎಂ.ಪಿ. ಶ್ರೀನಾಥ್, ಬಿ. ತಮ್ಮಯ್ಯ ಬಂಟ್ವಾಳ, ಸುಳ್ಯತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಗೌರವ ಅಧ್ಯಕ್ಷ ಎಸ್ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಉಮೇಶ್ ಬಿಳಿಮಲೆ, ಯೋಗೀಶ್ ಹೊಸೊಳಿಕೆ, ನೀರಬಿದಿರೆ ನಾರಾಯಣ, ರೇವತಿ, ಸಂಗೀತ ರವಿರಾಜ್, ಯು. ಸುಬ್ರಾಯ ಗೌಡ, ಜಯಂತಿ ಜನಾರ್ಧನರವರ ನೂತನ ಕೃತಿಗಳು ಬಿಡುಗಡೆಗೊಂಡವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News