ಪುತ್ತೂರು: ನಗರಸಭಾ ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ
ಪುತ್ತೂರು, ಮಾ.4: ನಗರಸಭೆಯಲ್ಲಿ ಆದರ್ಶ ಆಡಳಿತ ತರುತ್ತೇವೆ ಎಂದು ಹೇಳಿ ಅಧಿಕಾರ ಪಡೆದು ಕೊಂಡ ಕಾಂಗ್ರೆಸ್ ಸದಸ್ಯರು ಇದೀಗ ಅಧಿಕಾರ ದುರುಪಯೋಗದೊಂದಿಗೆ ಅವರೊಳಗೆ ಜಗಳವಾಡುತ್ತಾ ಪುತ್ತೂರನ್ನು ಹಾಳುಮಾಡುತ್ತಿದ್ದಾರೆ. ಆಡಳಿತ ವ್ಯವಸ್ಥೆಯನ್ನು ವಾರದೊಳಗೆ ಸರಿಪಡಿಸಿಕೊಳ್ಳದಿದ್ದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದನದಲ್ಲಿ ನಗರಸಭೆಯ ದುರಾಡಳಿತದ ಬಗ್ಗೆ ಧ್ವನಿಯೆತ್ತಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದರು.
ಅವರು ಬಿಜೆಪಿ ನಗರ ಮಂಡಲದ ನೇತೃತ್ವದಲ್ಲಿ ನಗರಸಭೆಯ ಆಡಳಿತ ವೈಫಲ್ಯದ ವಿರುದ್ದ ಶನಿವಾರ ನಗರಸಭೆಯ ಮುಂಬಾಗದ ಕಿಲ್ಲೆ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ನಗರಸಭೆಯಲ್ಲಿ ಬಹುಮತವಿಲ್ಲದ ಕಾಂಗ್ರೆಸ್ ಮೀಸಲಾತಿಯ ಕಾರಣದಿಂದ ಅಧ್ಯಕ್ಷ ಪಟ್ಟವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಅವರದೇ ಸರ್ಕಾರವಿದ್ದ ಕಾರಣ ನಗರಸಭೆಯನ್ನು ಆದರ್ಶ ನಗರವನ್ನಾಗಿ ಪತಿವರ್ತಿಸುವ ಅವಕಾಶ ಅವರಿಗಿತ್ತು. ಆದರೆ ಇಲ್ಲಿ ನಗರಸಭೆಯ ಅನುದಾನದಿಂದ ಕಾಂಗ್ರೆಸ್ ಪುಡಾರಿಗಳ ಮನೆಗಳು ಮಾತ್ರ ಆದರ್ಶವಾಗಿದೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ನಗರಸಭೆ ಆಡಳಿತ ಎಲ್ಲಿಯ ತನಕ ವೈಫಲ್ಯ ಕಂಡಿದೆ ಎಂದರೆ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಒಂದು ವಾರದಿಂದ ಬೆಂಕಿ ಬಿದ್ದರೂ ನಗರಸಭೆ ಅಧ್ಯಕ್ಷರು ಮತ್ತು ಶಾಸಕಿ ಅವರು ಆ ಬಗ್ಗೆ ಚಿಂತಿಸದೆ ಪಲಾಯನಗೈದಿದ್ದಾರೆ. ರಾಜ್ಯ ಸಂಸದೀಯ ಕಾರ್ಯದರ್ಶಿಯ ಪಟ್ಟ ಪಡೆದ ಪುತ್ತೂರಿನ ಶಾಸಕರು 70 ಸಂಭ್ರಮ ಆಚರಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ, ಪುತ್ತೂರಿನ ಶಾಸಕರಿಗೂ ಸರಿಯಾಗಿ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಪುತ್ತೂರು ಬರಗಾಲ ಆಗುವ ದಿನ ಇನ್ನೂ ದೂರ ಉಳಿದಿಲ್ಲ. ಸಚಿವರು ಕೇವಲ ಮಂಗಳೂರು ಮತ್ತು ಬಂಟ್ವಾಳವನ್ನು ಬರಪೀಡಿತ ಪ್ರದೇಶದ ಎಂದು ಘೋಷಣೆ ಮಾಡಿ ಪುತ್ತೂರಿಗೆ ಬೋರ್ ಕೊರೆಯಲು ಅವಕಾಶ ನೀಡದೆ ಮಲತಾಯಿ ದೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ ನಗರಸಭೆಯಲ್ಲಿ ಬಹುಮತದಿಂದ ಕೂಡಿದ ಬಿಜೆಪಿ ಸದಸ್ಯರಿದ್ದರೂ ಕಾಂಗ್ರೆಸ್ ಸದಸ್ಯರು ಅಧ್ಯಕ್ಷತೆಯನ್ನು ಪಡೆದು ಆಡಳಿತ ನಡೆಸುತ್ತಿದ್ದಾರೆ. 6 ತಿಂಗಳಾದರೂ ಸ್ಥಾಯಿ ಸಮಿತಿ ಸದಸ್ಯರ ನೇಮಕ ಮಾಡಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ಸರಿಯಾದ ಉತ್ತರ ನೀಡಿದ್ದರೂ ನಗರಸಭೆ ಆಡಳಿತ ಇನ್ನೂ ಪಾಠ ಕಲಿತಿಲ್ಲ ಎಂದು ದೂರಿದರು.
ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಗೋಪಾಲಕೃಷ್ಣ ಹೇರಳೆ, ಪುರಸಭೆ ಮಾಜಿ ಅಧ್ಯಕ್ಷೆ ಪ್ರೇಮಲತಾ ರಾವ್, ಮಾಜಿ ಸದಸ್ಯೆ ಶಶಿಕಲಾ ಸಿ.ಹೆಚ್ ಮಾತನಾಡಿದರು. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಪಕ್ಷದ ಮುಖಂಡರಾದ ವಿದ್ಯಾಗೌರಿ, ಶಂಭುಭಟ್, ಆರ್.ಸಿ.ನಾರಾಯಣ, ರಾಮದಾಸ್ ಹಾರಾಡಿ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ನಗರ ಯುವ ಮೋರ್ಛಾದ ಅಧ್ಯಕ್ಷ ಅನೀಷ್ ಬಡೆಕ್ಕಿಲ ಮನವಿಯನ್ನು ಸಭೆಯಲ್ಲಿ ಮಂಡಿಸಿದರು. ನಗರಸಭಾ ಸದಸ್ಯ ರಾಜೇಶ್ ಬನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ಸ್ವಾಗತಿಸಿದರು.
ಪ್ರತಿಭಟನಾ ಸಭೆಯ ಬಳಿಕ ಬಳಿಕ ಜಿಲ್ಲಾಧಿಕಾರಿಯವರಿಗೆ ಸಹಾಯಕ ಕಮೀಷನರ್ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ನಗರಸಭೆಯ ನಿರ್ಣಯ ತಿರುಚುವಿಕೆ, ಸ್ಥಾಯಿ ಸಮಿತಿ ಆಯ್ಕೆಯಾಗಿ 3 ತಿಂಗಳಾದರೂ ದಾಖಲೆ ಮಾಡಲದಿರುವುದ. ಖಾತಾ ಬದಲಾವಣೆಯಲ್ಲಿ ವಿಳಂಬ, ಉದ್ಯಮ ಪರವಾನಿಗೆ ನೀಡದಿರುವುದು, ಬಹುಮತದ ನಿರ್ಣಯ ಉಲ್ಲಂಘಿಸಿ ವಾರದ ಸಂತೆ ಸ್ಥಳಾಂತರ ಸೇರಿದಂತೆ 9 ಅಂಶಗಳನ್ನು ಉಲ್ಲೇಖಿಸಲಾಗಿತ್ತು.