ಮಣಿಪಾಲ: ಆರೋಗ್ಯ ಸೇವೆಗಾಗಿ 'ಹಲೋಡಾಕ್' ಟೆಲಿ ಆ್ಯಪ್
ಉಡುಪಿ, ಮಾ.4: ದೇಶದಲ್ಲೆಡೆ ಆರೋಗ್ಯ ಸೌಲಭ್ಯ ಒದಗಿಸಿಕೊಡುವ ಉದ್ದೇಶದಿಂದ ಮಣಿಪಾಲ ವಿವಿಯ ಹಳೆ ವಿದ್ಯಾರ್ಥಿಗಳಾದ ಡಾ.ಕುಮಾರ್ ಸಿದ್ಧಾರ್ಥ್ ಮತ್ತು ಎಂ.ಯುನೂಸ್ ತೋನ್ಸೆ 'ಹಲೋಡಾಕ್' ಎಂಬ ದೇಶದ ಮೊತ್ತ ಮೊದಲ ಟೆಲಿಆ್ಯಪ್‌ನ್ನು ಮಣಿಪಾಲದಲ್ಲಿ ಆರಂಭಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಡಾ.ಕುಮಾರ್ ಸಿದ್ಧಾರ್ಥ್ ಮತ್ತು ಎಂ.ಯುನೂಸ್ ತೋನ್ಸೆ ಈ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ವೈದ್ಯಕೀಯ ಸಹಾಯಕ್ಕಾಗಿ ಟೋಲ್‌ಫ್ರೀ ಸಂಖ್ಯೆ 1800 200 6359ಗೆ ಕರೆ ಮಾಡಿ ವೈದ್ಯರೊಂದಿಗೆ ಸಂಪೂರ್ಣ ಉಚಿತ ಸಮಾಲೋಚನೆ ನಡೆಸಬಹುದು. ಕರ್ನಾಟಕ, ಬಿಹಾರ,ದೆಹಲಿಯಲ್ಲಿ ಕಾರ್ಯಾಚರಿಸುವ ಹಲೋ ಡಾಕ್‌ನ್ನು ಆರು ತಿಂಗಳ ಹಿಂದೆ ಆರಂಭಿಸಲಾಗಿದ್ದು, ಈವರೆಗೆ 4,000 ಟೋಲ್ ಫ್ರೀ ಕರೆಗಳು ಬಂದಿವೆ ಎಂದರು.
ಪರಿಣತ ವೈದ್ಯರು ಫೋನ್ ಮೂಲಕ ರೋಗಿಗಳೊಂದಿಗೆ ಸಮಾ ಲೋಚನೆ ಮತ್ತು ಸಲಹೆ ನೀಡಲು ಲಭ್ಯವಿರುವಂತೆ ಮತ್ತು ಹೆಚ್ಚಿನ ಆರೈಕೆ ಹಾಗೂ ವೈದ್ಯರು ತಪಾಸಣೆಗೆ ಅತ್ಯುತ್ತಮ ಸೌಲಭ್ಯಗಳಿರುವ ಆಸ್ಪತ್ರೆ ಗಳೊಂದಿಗೆ ಸಹಭಾಗಿತ್ವ ಹೊಂದಿಸುವ ಕೆಲಸವನ್ನು ತಂಡ ಮಾಡುತ್ತದೆ. ಈ ಉದ್ದೇಶಕ್ಕಾಗಿ ಹಲೋಡಾಕ್ ಮಣಿಪಾಲ ಕೆಎಂಸಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ನಮ್ಮ ಗ್ರಾಹಕರು ತಮಗೆ ಬೇಕಾದ ನುರಿತ ವೈದ್ಯಕೀಯ ತಂಡದಿಂದ ಮಾಹಿತಿ ಪಡೆಯಬಹುದು ಮತ್ತು ತಮ್ಮ ಆರೋಗ್ಯ ಸಂಬಂಧಿ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಅವಿನಾಶ್ ಪ್ರಭು ಉಪಸ್ಥಿತರಿದ್ದರು.