ಉಡುಪಿ: ಪಿಯುಸಿ ವಿದ್ಯಾರ್ಥಿಗಳ ಸನಿವಾಸ ಶಿಬಿರ ಉದ್ಘಾಟನೆ
ಉಡುಪಿ, ಮಾ.4: ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಘಟಕದ ವತಿಯಿಂದ ಪ್ರಥಮ ಪಿಯು ಮುಗಿಸಿದ ವಿದ್ಯಾರ್ಥಿಗಳಿಗೆ ಅಂಬಲ ಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪ ದಲ್ಲಿ ಹಮ್ಮಿಕೊಳ್ಳಲಾದ ಐದು ದಿನಗಳ ಸನಿವಾಸ ಶಿಬಿರವನ್ನು ದೇವಳದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಶನಿವಾರ ಉದ್ಘಾಟಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗಟ್ಟಿಯಾದ ಹಾಗೂ ನಿರ್ದಿಷ್ಟ ಗುರಿ ಯನ್ನು ಹೊಂದಿರಬೇಕು. ಅದನ್ನು ಸಾಧಿಸಿ ತೋರಿಸಬೇಕು. ಎಲ್ಲರು ಡಾಕ್ಟರ್ ಇಂಜಿನಿಯರ್ ಆಗಲು ಹೋಗದೆ ವಿಜ್ಞಾನ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ಹೊಸ ಹೊಸ ಸಂಶೋಧನೆಗಳನ್ನು ಮಾಡಬೇಕು ಎಂದು ಡಾ.ವಿಜಯ ಬಲ್ಲಾಳ್ ಹೇಳಿದರು.
ಮುಖ್ಯ ಅತಿಥಿಯಾಗಿ ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಎಲ್ಲ ಕ್ಷೇತ್ರದಲ್ಲೂ ಒತ್ತಡ ಎಂಬುದಿದೆ. ಅದನ್ನು ಮೆಟ್ಟಿ ನಿಲ್ಲಲು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಳು ಗುರಿಯನ್ನು ಹೊಂದಿ ಆ ದಾರಿಯಲ್ಲಿ ಸಾಗಬೇಕು ಎಂದರು.
ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್‌ನ ವಿಶ್ವಸ್ಥ ಯು.ಕೆ.ರಾಘವೇಂದ್ರ ರಾವ್, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜನರಲ್ ಮೆನೇಜರ್ ಇಂದ್ರಾಳಿ ಜಯಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ಸಿಂಡಿಕೇಟ್ ಬ್ಯಾಂಕ್‌ನ ಎಸ್.ಎಸ್.ಹೆಗ್ಡೆ ವಹಿಸಿದ್ದರು.
ಶಿಬಿರದ ನಿರ್ದೇಶಕ ಧಾರವಾಡದ ಪ್ರವೀಣ್ ಗುಡಿ, ಕಲಾರಂಗದ ಉಪಾಧ್ಯಕ್ಷರಾದ ಗಂಗಾಧರ್ ರಾವ್, ಎಸ್.ವಿ.ಭಟ್ ಉಪಸ್ಥಿತರಿದ್ದರು. ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಈ ಶಿಬಿರದಲ್ಲಿ ಆಂಗ್ಲಬಾಷಾ ಕೌಶಲ ವೃದ್ಧಿ, ಸಂವಹನ ಕೌಶಲ ವೃದ್ಧಿ, ನಾಯಕತ್ವಗುಣ, ವೃತ್ತಿ ಮಾರ್ಗದರ್ಶನ, ಸಮೂಹ ಸಹಭಾಗಿತ್ವ, ಸಮಾಜ ಮುಖಿ ಚಿಂತನೆ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದ ಕುರಿತು ಐದು ಮಂದಿಯ ತಂಡ ತರಬೇತಿ ನೀಡಲಿದೆ. ಒಟ್ಟು 350 ವಿದ್ಯಾರ್ಥಿಗಳ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.