ಎಚ್-1ಬಿ ವೀಸಾ ವಿವಾದ : ಭಾರತ ಕಳವಳ ಪಡುವ ಅಗತ್ಯವಿಲ್ಲ: ಅಮೆರಿಕದ ಭರವಸೆ

Update: 2017-03-04 14:17 GMT

ವಾಷಿಂಗ್ಟನ್, ಮಾ.4: ಎಚ್-1ಬಿ ವೀಸಾದ ವಿಷಯ ತನ್ನ ಆದ್ಯತೆಯ ಪಟ್ಟಿಯಲ್ಲಿ ಇಲ್ಲ ಎಂದು ಭಾರತಕ್ಕೆ ಭರವಸೆ ನೀಡಿರುವ ಅಮೆರಿಕ, ಇದು ಟ್ರಂಪ್ ಆಡಳಿತ ರೂಪಿಸುತ್ತಿರುವ ವಲಸೆ ಯೋಜನೆಯ ಒಂದು ಭಾಗವಾಗಿದೆ ಎಂದು ಭರವಸೆ ನೀಡಿದೆ.

 ಎಚ್-1ಬಿ ವೀಸಾದ ಬಳಕೆಯನ್ನು ಮೊಟಕುಗೊಳಿಸುವ ನಿಟ್ಟಿನಲ್ಲಿ ಟ್ರಂಪ್ ಆಡಳಿತವು ಒಂದು ಕಾರ್ಯನಿರ್ವಹಣಾ ಆದೇಶವನ್ನು ಜಾರಿಗೆ ತರಲು ಯತ್ನಿಸುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ ಅಮೆರಿಕದಿಂದ ಈ ಭರವಸೆ ದೊರೆತಿದೆ.

 ಭಾರತೀಯ ತಂತ್ರಜ್ಞಾನ ಕ್ಷೇತ್ರದ ಕೊಡುಗೆಯನ್ನು ಗೌರವಿಸಬೇಕು ಎಂಬ ಭಾವನೆಯಿದೆ. ಖಂಡಿತವಾಗಿಯೂ ಎಚ್-1ಬಿ ವೀಸಾದ ವಿಷಯಕ್ಕೆ ಸರಕಾರ ಆದ್ಯತೆ ನೀಡುತ್ತಿಲ್ಲ. ವಲಸೆ ಸಮಸ್ಯೆಯ ಬಗ್ಗೆ ಅವರ ಗಮನ ಕೇಂದ್ರಿತವಾಗಿದೆ ಎಂದು ಅಮೆರಿಕಕ್ಕೆ ಭೇಟಿ ನೀಡಿರುವ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ರೀಟಾ ತಿಯೋಟಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ವಿದೇಶ ವ್ಯವಹಾರ ಇಲಾಖೆಯ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಅಮೆರಿಕಕ್ಕೆ ಭೇಟಿ ನೀಡಿರುವ ರೀಟಾ, ಟ್ರಂಪ್ ಆಡಳಿತದ ಉನ್ನತ ಅಧಿಕಾರಿಗಳು ಹಾಗೂ ಅಮೆರಿಕ ಸಂಸತ್ತಿನ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು ಈ ಚರ್ಚೆಯ ವೇಳೆ ಎಚ್-1ಬಿ ವೀಸಾದ ವಿಷಯವನ್ನು ಪ್ರಮುಖವಾಗಿ ಪ್ರಸ್ತಾವಿಸಲಾಗಿತ್ತು. ಎಚ್-1ಬಿ ವೀಸಾ ಎಂಬುದು ವ್ಯಾಪಾರ ಮತ್ತು ಸೇವೆಯ ವಿಭಾಗಕ್ಕೆ ಸೇರಿದ್ದು ಅಮೆರಿಕದ ಅರ್ಥವ್ಯವಸ್ಥೆ ಹೆಚ್ಚು ಸ್ಪರ್ಧಾತ್ಮಕವಾಗಿರಲು ನೆರವಾಗುತ್ತದೆ ಎಂಬ ಅಭಿಪ್ರಾಯವನ್ನು ಭಾರತ ಚರ್ಚೆಯ ವೇಳೆ ವ್ಯಕ್ತಪಡಿಸಿತ್ತು.

  ಅಮೆರಿಕದ ಸಂಸ್ಥೆಗಳನ್ನು ಅಮೆರಿಕಕ್ಕೆ ವಾಪಾಸು ಕರೆತರುವುದು ಮತ್ತು ಹೆಚ್ಚಿನ ವಿದೇಶಿ ಬಂಡವಾಳ ಆಕರ್ಷಿಸುವುದು ಟ್ರಂಪ್ ಆಡಳಿತದ ಉದ್ದೇಶವಾಗಿದ್ದಲ್ಲಿ , ಅಮೆರಿಕ ಹೆಚ್ಚು ಸ್ಪರ್ಧಾತ್ಮಕವಾಗಿರುವುದು ಮುಖ್ಯವಾಗಿದೆ. ಆದ್ದರಿಂದ ಈ ಸಹಭಾಗಿತ್ವಕ್ಕೆ ಹೆಚ್ಚಿನ ಅವಶ್ಯಕತೆಯಿದೆ ಎಂದು ಜೈಶಂಕರ್ ತಿಳಿಸಿದರು. ಎಚ್-1ಬಿ ಎಂಬುದು ವ್ಯವಹಾರ ಮತ್ತು ವ್ಯಾಪಾರದ ವಿಷಯವಾಗಿದ್ದು ಇದು ಆರ್ಥಿಕ ವಿಷಯವಾಗಿಲ್ಲ. ಅದಾಗ್ಯೂ, ಅಮೆರಿಕದ ಸಂದರ್ಭದಲ್ಲಿ ಇದನ್ನು ವಲಸೆ ವಿಷಯದ ಭಾಗವಾಗಿ ಸೇರಿಸಲಾಗಿದೆ ಎಂದು ಅವರು ಹೇಳಿದರು.

  ಅಧ್ಯಕ್ಷರು ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ವಿಷಯದ ಬಗ್ಗೆ ಅರ್ಹತೆ ಆಧಾರಿತ ಪ್ರಸ್ತಾವನೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಭಾರತೀಯರ ಸಾಮರ್ಥ್ಯದ ಬಗ್ಗೆ ಅಮೆರಿಕದಲ್ಲಿ ಸಾಕಷ್ಟು ಗೌರವದ ಭಾವನೆಯಿದೆ ಎಂದು ಜೈಶಂಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News